ಕಾಂಗ್ರೆಸ್‍ನಿಂದ ನಕಲಿ ಡೈರಿ ಬಿಡುಗಡೆ : ಯಾವುದೇ ತನಿಖೆಗೆ ಸಿದ್ಧ ಲೇಹರ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

lehar-singh

ಬೆಂಗಳೂರು, ಫೆ.26– ಬಿಜೆಪಿ ವರಿಷ್ಠರಿಗೆ ಹಣ ನೀಡಲಾಗಿದೆ ಎಂಬ ಮಾಹಿತಿಯುಳ್ಳ ಡೈರಿ ಹಾಗೂ ಅದರಲ್ಲಿರುವ ಸಹಿ ನಕಲಿಯಾಗಿದ್ದು, ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಸಹ ಖಜಾಂಚಿ ಲೇಹರ್‍ಸಿಂಗ್ ಇಂದಿಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಡೈರಿ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಲಾಗಿದೆ. ಜತೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಅವರನ್ನು ಕೋರಲಾಗಿದೆ ಎಂದರು.

ನಕಲಿ ಡೈರಿಯ ಮೂಲ ಪತ್ತೆ ಮಾಡಬೇಕೆಂದು ಗೃಹ ಸಚಿವರನ್ನು ಕೋರುತ್ತೇನೆ. ವಾಟ್ಸಾಪ್‍ನಲ್ಲಿ ಕೆಲವರು ಡೈರಿ ಮಾಹಿತಿ ಕಳುಹಿಸಿದಾಗ ಇದು ಸಣ್ಣ ಮಕ್ಕಳಿಗೂ ನಕಲಿ ಎಂದು ಗೊತ್ತಾಗುತ್ತದೆ ಎಂದು ನಕ್ಕಿದ್ದೆ. ಆದರೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ನಿನ್ನೆ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿರುವುದರಿಂದ ತನಿಖೆ ನಡೆಸುವಂತೆ ದೂರು ನೀಡಿದ್ದೇನೆ ಎಂದರು.  ಹಣದ ಆರೋಪ ಕೇಳಿ ಬಂದಿರುವುದರಿಂದ ಪೊಲೀಸರೇ ಸ್ವಇಚ್ಛೆಯಿಂದ ತನಿಖೆ ನಡೆಸಬೇಕಿತ್ತು. ತಾವು ದೂರು ನೀಡಲು ಹೋದಾಗ ನಗರ ಪೊಲೀಸ್ ಆಯುಕ್ತರು ರಜೆ ಇರುವ ಪ್ರಸ್ತಾಪ ಮಾಡಿದ್ದರು. ಅದರ ಹಿಂದೆ ರಾಜ್ಯ ಸರ್ಕಾರ ಒತ್ತಡ ಇದೆ ಎಂದು ಗಂಭೀರ ಆರೋಪ ಮಾಡಿದರು.

ನಾನು ವಿಧಾನಪರಿಷತ್ ಸದಸ್ಯನಾಗಿರುವುದರಿಂದ ಅಲ್ಲಿನ ಹಾಜರಾತಿ ಪುಸ್ತಕದಲ್ಲಿ ನನ್ನ ಸಹಿ ಇರುತ್ತದೆ. ಅಲ್ಲಿನ ಸಹಿಗೂ, ಈ ಸಹಿಗೂ ಇರುವ ವ್ಯತ್ಯಾಸವನ್ನು ತನಿಖೆ ನಡೆಸಲಿ. ಈ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಬರೆದ ಪತ್ರವನ್ನು ಪ್ರಸ್ತಾಪಿಸಿದ್ದಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಈಗಾಗಲೇ ಅಡ್ವಾಣಿಯವರಲ್ಲಿ ಈ ಬಗ್ಗೆ ಕ್ಷಮೆ ಯಾಚಿಸಿದ್ದೇನೆ. ನಾಲ್ಕು ವರ್ಷದ ಹಿಂದಿನ ಪತ್ರದ ಬಗ್ಗೆ ಕಾಂಗ್ರೆಸ್‍ನವರು ಇದುವರೆಗೂ ಸುಮ್ಮನಿದ್ದು, ಈಗ ಏಕೆ ಚರ್ಚೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.  ನನ್ನ ಜೀವನದಲ್ಲಿ ಡೈರಿ ಬರೆಯುವ ಅಭ್ಯಾಸವಿಲ್ಲ. ಸತ್ಯಾಂಶ ಹೊರಬರಲು ಸಿಬಿಐ, ಲೋಕಾಯುಕ್ತ, ನ್ಯಾಯಾಂಗ ಸೇರಿದಂತೆ ಯಾವುದೇ ರೀತಿ ತನಿಖೆ ನಡೆಸಬಹುದು ಎಂದ ಅವರು, ಈಗಾಗಲೇ ಸಂಜಯ್‍ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿರುವುದಾಗಿ ತಿಳಿಸಿದರು.  ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin