‘ನಾನು ಪಕ್ಷದ ಶಿಸ್ತಿನ ಸಿಪಾಯಿ, ಸಚಿವನಾಗಿರಲೂ ಸಿದ್ದ, ಕಾರ್ಯಕರ್ತನಾಗಿ ದುಡಿಯಲೂ ಬದ್ಧ’

ಈ ಸುದ್ದಿಯನ್ನು ಶೇರ್ ಮಾಡಿ

H-Anjanaiah

ಬೆಂಗಳೂರು, ಫೆ.26- ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಸಚಿವ ಸ್ಥಾನದಲ್ಲಿ ಮುಂದುವರೆಯಲೂ ಸಿದ್ದ. ಪಕ್ಷದ ಕಾರ್ಯಕರ್ತನಾಗಿ ದುಡಿಯಲೂ ಬದ್ಧ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ವರ್ಷ ಅವಧಿ ಪೂರೈಸಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಯಾರೂ ಅಧಿಕೃತವಾಗಿ ಹೇಳಿಲ್ಲ. ಇದು ಕೇವಲ ಮಾಧ್ಯಮಗಳ ವದಂತಿ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರು ಆ ರೀತಿ ಹೇಳಿದ್ದರೆ ಸಂತೋಷ. ಸರ್ಕಾರದ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಲು, ಪಕ್ಷ ಬಲಪಡಿಸಲು ಮತ್ತಷ್ಟು ಕೆಲಸಗಳನ್ನು ಮಾಡಬೇಕಿದೆ. ಪಕ್ಷ ಯಾವುದೇ ಆದೇಶ ಕೊಟ್ಟರೂ ಅದನ್ನು ಪಾಲಿಸಲು ಸಿದ್ದನಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಯೋಜನೆಗಳನ್ನು ಕೊಟ್ಟು ಕರ್ನಾಟಕದಲ್ಲಿ ಕಾಂಗ್ರೆಸನ್ನು ಗಟ್ಟಿಯಾಗಿ ನಿಲ್ಲಿಸಿದ್ದಾರೆ. ಪಕ್ಷ ಜನಮನ್ನಣೆ ಗಳಿಸಿದ್ದು, ಸದೃಢವಾಗಿದೆ. ಹೀಗಾಗಿ ಬಿಜೆಪಿ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಸಿದ್ಧವಾಗಿದೆ.  ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿದೆ ಎಂಬ ಮಾಹಿತಿಯುಳ್ಳ ಡೈರಿ ಒಂದು ಸಣ್ಣ ಚೀಟಿಯಷ್ಟೇ ಅದಕ್ಕೆ ಇಷ್ಟೊಂದು ದೊಡ್ಡ ಪ್ರಚಾರ ಕೊಡುವ ಅಗತ್ಯವಿಲ್ಲ. ಮಾಧ್ಯಮಗಳು ಸ್ಥಳೀಯವಾಗಿ ರಾಜ್ಯ ಸರ್ಕಾರದ ಜತೆ ಇರಬೇಕು. ಬಿಜೆಪಿಯವರು ಹೇಳಿದ್ದನ್ನು ದೊಡ್ಡದಾಗಿ ಪ್ರಚಾರ ಮಾಡಿ, ನಾವು ಹೇಳಿದ್ದನ್ನು ಸಣ್ಣದಾಗಿ ಪ್ರಕಟಿಸುತ್ತಿವೆ. ಈ ತಾರತಮ್ಯ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಡತನ, ಬರಗಾಲ, ಜಾನುವಾರುಗಳ ಮೇವಿನ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು ಆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಅದನ್ನು ಬಿಟ್ಟು ಬೇರೆ ವಿಷಯವಾಗಿ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.  ಕಾಂಗ್ರೆಸ್ ಸಮನ್ವಯ ಸಮಿತಿಗೂ, ಡೈರಿ ಪ್ರಕರಣಕ್ಕೂ ಸಂಬಂಧವಿಲ್ಲ. ಸಮನ್ವಯ ಸಮಿತಿ ಸಭೆಗೆ ಈ ಹಿಂದೆಯೇ ದಿನಾಂಕ ನಿಗದಿಯಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin