ಕೆರೆಗಳ ಕಾಯಕಲ್ಪದಿಂದ ಅಂತರ್ಜಲ ಹೆಚ್ಚಾಗಿ ನೀರಿನ  ಸಮಸ್ಯೆ ನಿವಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಫೆ.27- ಕೆರೆಗಳಿಗೆ ಕಾಯಕಲ್ಪ ನೀಡುವುದರಿಂದ ಅಂತರ್ಜಲ ಹೆಚ್ಚಾಗಿ ನೀರಿನ ಕೊರತೆ ನೀಗಿಸಲು ಸಹಕಾರಿಯಾಗುವ ಜತೆಗೆ ರೈತರಿಗೂ ಅನುಕೂಲವಾಗಲಿದೆ ಎಂದು ಮಾಜಿ ಸಚಿವ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ಕೆರೆ ಸಂಜೀವಿನಿ ಯೋಜನೆಯಡಿ ಬೆಳವನೂರು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಬೆಳವನೂರು, ತುರ್ತಘಟ್ಟ ಸೇರಿದಂತೆ ಐದು ಕೆರೆಗಳ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬೆಳವನೂರು ಕೆರೆಗೆ ಕಾಯಕಲ್ಪ ನೀಡುವುದರಿಂದ ಬರದಿಂದ ತತ್ತರಿಸಿರುವ ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದರ ಜತೆಗೆ ದಾವಣಗೆರೆಯ ಕೆಲವು ಭಾಗಗಳಿಗೂ ಕುಡಿಯುವ ನೀರು ಪೂರೈಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಬೆಳವನೂರು ಮತ್ತು ತುರ್ತಘಟ್ಟ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿ ಜಾಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಹಕರಿಸಿದ ರೈತರಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.
ಕೆರೆ ಹೂಳೆತ್ತಿದ ಮಣ್ಣನ್ನು ಬೇರೆಡೆ ಸಾಗಿಸುವ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಅನಗತ್ಯ ಪ್ರಕರಣ ದಾಖಲಿಸಿದ್ದಾರೆ ಎಂದು ಗ್ರಾಮದ ಮುಖಂಡರೊಬ್ಬರು ಶಾಸಕರ ಗಮನ ಸೆಳೆದಾಗ ಅಂತಹ ವಾಹನಗಳಿಗೆ ಪಾಸ್ ವಿತರಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.ಶೀಘ್ರದಲ್ಲೇ ತುರ್ತಘಟ್ಟ ಕೆರೆ ಕಾಯಕಲ್ಪ ಕಾಮಗಾರಿಗೆ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.ಜಿಪಂ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್, ಸದಸ್ಯ ಜಿ.ಸಿ.ನಿಂಗಪ್ಪ, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸದಸ್ಯ ಎಂ.ಮಂಜಪ್ಪ, ಎಪಿಎಂಸಿ ಸದಸ್ಯ ಬಿಸಲೇರಿ ಈರಣ್ಣ, ಬೆಳವನೂರು ಗ್ರಾಪಂ ಅಧ್ಯಕ್ಷೆ ಹಾಲಮ್ಮ ದುರ್ಗಪ್ಪ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin