ಡೈರಿಯಿಂದ ಕಾಂಗ್ರೆಸ್ ನಿಜ ಬಣ್ಣ ಬಯಲಾಗಿದೆ : ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Tumakuru

ಬೆಂಗಳೂರು,ಫೆ.27-ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಡೈರಿಯಲ್ಲಿ ಬಹಿರಂಗಗೊಂಡಿರುವ ಸತ್ಯಾಂಶಗಳಿಂದ ಕಾಂಗ್ರೆಸ್‍ನ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.   ತುಮಕೂರಿಗೆ ತೆರಳುವ ಮುನ್ನ ಟಿ.ಬೇಗೂರು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛ , ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರ ಅಸಲಿ ಮುಖ ಜನರಿಗೆ ಗೊತ್ತಾಗಿದೆ ಎಂದು ಹರಿಹಾಯ್ದರು.

ಡೈರಿಯಲ್ಲಿ ಕಾಂಗ್ರೆಸ್ ಸರ್ಕಾರದ ನೂರಾರು ಕೋಟಿ ಭ್ರಷ್ಟಾಚಾರ ಬಯಲಾಗಿದೆ. ಇದರ ಸತ್ಯಾಂಶ ಹೊರ ಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ. ತಕ್ಷಣವೇ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಲಿ ಎಂದು ಒತ್ತಾಯಿಸಿದರು.   ತಾವು ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಜನತೆ ಮುಂದೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಚಿವರಿಂದ ನೂರಾರು ಕೋಟಿ ಹಣ ಸಂಗ್ರಹಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‍ಗೆ ನೀಡಿರುವುದು ಡೈರಿಯಲ್ಲಿ ಪ್ರಸ್ತಾಪವಾಗಿದೆ. ಹಾಗಿದ್ದರೂ ಏನೂ ಆಗಿಯೇ ಇಲ್ಲ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಡೈರಿಯಲ್ಲಿ ಕಾಂಗ್ರೆಸ್‍ನ ಭ್ರಷ್ಟಾಚಾರ ಬಟಬಯಲಾಗಿದೆ. ಇದರ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು ಡೈರಿ ಎಲ್ಲಿಂದ ಬಂತು, ಹೇಗೆ ಸಿಕ್ಕಿತು. ಯಾರು ಕೊಟ್ಟಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮೊದಲು ಭ್ರಷ್ಟಾಚಾರ ನಡೆದಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.   ಸ್ಟೀಲ್ ಬ್ರಿಡ್ಜ್ ಕಾಮಗಾರಿಯಲ್ಲಿ 65 ಕೋಟಿ ಮುಖ್ಯಮಂತ್ರಿಗೆ ಸಂದಾಯವಾಗಿದೆ ಎಂಬುದಕ್ಕೆ ಡೈರಿಯೇ ಸಾಕ್ಷಿ. ನಾನು ಇದನ್ನು ಬಹಿರಂಗಪಡಿಸಿದ್ದಕ್ಕೆ ಅನೇಕರು ಬಾಯಿಗೆ ಬಂದಂತೆ ಮಾತನಾಡಿದರು. ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ವಿರುದ್ದ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿರುವ ಡೈರಿ ಕಾಂಗ್ರೆಸ್‍ನ ಸುಳ್ಳಿನ ಕಂತೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಇಂತಹ ನೀಚ ಕೃತ್ಯ ಎಸಗಲಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಗುಡುಗಿದರು.

ರಾಜ್ಯಾದ್ಯಂತ ಕಾಂಗ್ರೆಸ್‍ನ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುವುದು. ಸುಮಾರು ಒಂದು ಸಾವಿರ ಕೋಟಿ ಹಣವನ್ನು ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಹೈಕಮಾಂಡ್‍ಗೆ ತಲುಪಿಸಿದ್ದಾರೆ.   ಬಿಬಿಎಂಪಿಯಲ್ಲೂ ಕೂಡ ಮೂರುವರೆ ಸಾವಿರ ಕೋಟಿ ಭ್ರಷ್ಟಾಚಾರ ನಡೆಸಲಾಗಿದೆ. ಜನತೆಯ ತೆರಿಗೆ ಹಣವನ್ನೇ ಅನೇಕರು ನುಂಗಿ ಹಾಕಿದ್ದಾರೆ. ಇದರ ದಾಖಲೆಗಳು ನನ್ನ ಬಳಿ ಇವೆ. ಮೂರ್ನಾಲ್ಕು ದಿನದಲ್ಲೇ ಪತ್ರಿಕಾಗೋಷ್ಠಿ ಕರೆದು ಬಹಿರಂಗಪಡಿಸುವುದಾಗಿ ಹೇಳಿದರು.   ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿರುವ ಹಗರಣಗಳು ಒಂದೊಂದಾಗೆ ಹೊರಬರುತ್ತಿವೆ. ಇದರ ವಿರುದ್ಧ ಜನತೆಯ ಬಳಿ ತೆರಳುವೆ. ಕಾಂಗ್ರೆಸ್‍ನ ನಿಜಬಣ್ಣ ಬಯಲು ಮಾಡುವವರೆಗೂ ತಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin