ಮಾ.31ರಿಂದ ಗಬ್ಬು ನಾರಲಿದೆಯೇ ಬೆಂಗಳೂರು..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru--BBMP

ಬೆಂಗಳೂರು, ಫೆ.27-ಮಾರ್ಚ್ 31ರೊಳಗೆ ಪೌರಕಾರ್ಮಿಕರನ್ನು ಖಾಯಂಗೊಳಿಸದಿದ್ದರೆ 31 ರಿಂದಲೇ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಪೌರಕಾರ್ಮಿಕರ ಒಕ್ಕೂಟ ತೀರ್ಮಾನಿಸಿದೆ. ನಾಲ್ಕು ಸಾವಿರ ಪೌರಕಾರ್ಮಿಕರ ಖಾಯಮಾತಿಗೆ ಸರ್ಕಾರ ತೀರ್ಮಾನಿಸಿದ್ದರೂ ಇದುವರೆಗೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಸದಸ್ಯರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಮುನಿರಾಜು, ಪೌರಕಾರ್ಮಿಕರ ಖಾಯಮಾತಿಗೆ ಮಾ.31ರ ಗಡುವು ವಿಧಿಸಿ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಇಎಸ್‍ಐ, ಪಿಎಫ್‍ನಂತಹ ಸೌಲಭ್ಯವೂ ಕಲ್ಪಿಸಿಲ್ಲ. ನೇಮಕಾತಿ ಮಾಡಿಕೊಳ್ಳಿ ಎಂದರೆ ಏಕಕಾಲದಲ್ಲಿ ನೇಮಕಾತಿ ಮಾಡಿಕೊಳ್ಳದೆ ಹಂತಹಂತವಾಗಿ ಮಾಡಿಕೊಳ್ಳುವುದಾಗಿ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಸಾವಿರಾರು ಪೌರಕಾರ್ಮಿಕರ ಕುಟುಂಬ ಬೀದಿ ಪಾಲಾಗುತ್ತಿದೆ. ಇನ್ನು ಮುಂದೆ ಅಧಿಕಾರಿಗಳ ಈ ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ ಎಂದು ಹೇಳಿದರು.  ಸರ್ಕಾರ ನೀಡಿರುವ ಆಶ್ವಾಸನೆಯಂತೆ ಮಾ.31ರೊಳಗೆ ಪೌರಕಾರ್ಮಿಕರನ್ನು ಖಾಯಮಾತಿ ಮಾಡಿಕೊಳ್ಳದಿದ್ದರೆ ರಾಜ್ಯದ 30 ಜಿಲ್ಲೆಗಳಲ್ಲೂ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸುತ್ತೇವೆ. ನಂತರ ಇಡೀ ರಾಜ್ಯವೇ ಗಬ್ಬೆದ್ದು ಹೋದರೂ ಸ್ವಚ್ಛತೆಗೆ ಮುಂದಾಗುವುದಿಲ್ಲ ಎಂದು ಎಚ್ಚರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin