ಕಾಳಧನಿಕರ ವಿರುದ್ಧ ಸಮರ : 7 ಲಕ್ಷ ಬೇನಾಮಿ ಕಂಪೆನಿಗಳಿಗೆ ಬೀಗ ಮುದ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Black-Money--02

ನವದೆಹಲಿ, ಫೆ.28– ಕಾಳಧನದ ವಿರುದ್ಧ ಹೋರಾಟದ ಪರಿಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿ ಸಾಂಸ್ಥಿಕ ಹಣ ದುರ್ಬಳಕೆ ದಂಧೆಗಳಿಗೆ ಕಡಿವಾಣ ಹಾಕುತ್ತಿರುವುದರಿಂದ ದೇಶಾದ್ಯಂತ ಇರುವ ಸುಮಾರು 7 ಲಕ್ಷಕ್ಕೂ ಹೆಚ್ಚು ಬೇನಾಮಿ ಮತ್ತು ಬೋಗಸ್ ಸಂಸ್ಥೆಗಳು (ಷೆಲ್ ಕಂಪನಿಗಳು) ಬೀಗಮುದ್ರೆ ಭೀತಿಗೆ ಒಳಗಾಗಿವೆ.   ಅಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಇವುಗಳಲ್ಲಿ ಈ ಕಂಪನಿಗಳು ಬ್ಯಾಂಕ್‍ಗಳಲ್ಲಿ ದೊಡ್ಡಮಟ್ಟದ ವ್ಯವಹಾರಗಳನ್ನು ನಡೆಸುತ್ತ ಭಾರೀ ಮೊತ್ತವನ್ನು ಠೇವಣಿಯಾಗಿರಿಸಿದ್ದವು. ಈಗ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಇಂಥ ಕಂಪೆನಿಗಳ ವಿರುದ್ಧ ಚಾಟಿ ಬೀಸಿರುವುದರಿಂದ ಇವುಗಳ ವಹಿವಾಟು ಬಂದ್ ಆಗುವ ಜೊತೆಗೆ ಕಾನೂನು ಕುಣಿಕೆಯೂ ಬಿಗಿಗೊಳ್ಳಲಿದೆ.
ಬೇನಾಮಿ ಹೆಸರಿನಲ್ಲಿ ಈ ರೀತಿ ನೋಂದಣಿಯಾದ 15 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಪರಿಶೀಲನೆಗೆ ಒಳಪಡಿಸುವುದು ಒಂದು ಕಷ್ಟಸಾಧ್ಯದ ಕೆಲಸ. ಭಾರತದಲ್ಲಿ ನೋಂದಣಿಯಾದ ಕಂಪನಿಗಳಲ್ಲಿ ಶೇ.40ಕ್ಕಿಂತ ಹೆಚ್ಚು ಕಂಪನಿಗಳು ಬೇನಾಮಿ ಹೆಸರಿನಲ್ಲಿವೆ ಎಂದು ಶಂಕಿಸಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತರ ಸಂಸ್ಥೆಗಳೊಂದಿಗೆ ಇಂಥ ಷೆಲ್ ಕಂಪನಿಗಳನ್ನು ಪರಿಶೀಲಿಸುವ ಸವಾಲಿನ ಕಾರ್ಯವನ್ನು ಕೈಗೊಂಡಿದೆ.

ಐನೂರು ಮತ್ತು ಒಂದು ಸಾವಿರ ರೂ. ಮುಖಬೆಲೆಯ ನೋಟುಗಳ ನಿಷೇಧದ ನಂತರ ಕೇವಲ ಎರಡು ತಿಂಗಳ ಅವಧಿಯಲ್ಲಿ ಬೃಹತ್ ಠೇವಣಿಗಳನ್ನು ಇಟ್ಟಿರುವ ಷೆಲ್ ಕಂಪನಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಸಿಬಿಡಿಟಿ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.   ಇಂಥ ಕಂಪನಿಗಳ ವಹಿವಾಟು, ಆಸ್ತಿ-ಪಾಸ್ತಿಗಳು ಮತ್ತು ವ್ಯಾಪಾರ-ವಹಿವಾಟುಗಳ ಬಗ್ಗೆ ಐಟಿ ಅಧಿಕಾರಿಗಳು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಇಂಥ ಕಂಪನಿಗಳು ಈವರೆಗೆ ವಾರ್ಷಿಕ ಆದಾಯ ತೆರಿಗೆ ಮಾಹಿತಿಗಳನ್ನು ಸಲ್ಲಿಸದಿರುವುದು ಕೂಡ ಇವುಗಳ ಅಕ್ರಮ, ಅವ್ಯವಹಾರಗಳಿಗೆ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin