ಬ್ರಿಗೇಡ್ ಬಗ್ಗೆ ಈಶ್ವರಪ್ಪ ನಿರಾಸಕ್ತಿ, ನಡುನೀರಲ್ಲಿ ಮುಖಂಡರು

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Brigade--01

ಬೆಂಗಳೂರು,ಫೆ.28-ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಮುಖಂಡ ಕೆ.ಎಸ್.ಈಶ್ವರಪ್ಪ ನಡೆಗೆ ಇದೀಗ ಕಾರ್ಯಕರ್ತರು, ಮುಖಂಡರೇ ತಿರುಗಿಬಿದ್ದಿದ್ದಾರೆ.   ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಟಿಕೆಟ್ ಖಚಿತ ಎಂಬ ಸುಳಿವು ವರಿಷ್ಠರಿಂದ ಸಿಗುತ್ತಿದ್ದಂತೆ ಈಶ್ವರಪ್ಪ ಸಂಘಟನೆಯಿಂದ ಇತ್ತೀಚೆಗೆ ದೂರುವಾಗುತ್ತಿದ್ದಾರೆ. ಹೀಗಾಗಿ ಅವರನ್ನು ನಂಬಿಕೊಂಡಿದ್ದ ನಾಯಕರು ಕೆಂಡ ಕಾರುತ್ತಿದ್ದಾರೆ.  ಈಶ್ವರಪ್ಪ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ಹೆಸರು ಬಳಸಿಕೊಂಡರು. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗುವುದು ಖಚಿತವಾಗುತ್ತಿದ್ದಂತೆ ನಮ್ಮನ್ನು ನಡುನೀರಲ್ಲಿ ಕೈಬಿಟ್ಟರೆಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಅದರಲ್ಲೂ ಯಡಿಯೂರಪ್ಪ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಎಸ್.ಕೆ.ಬೆಳ್ಳುಬ್ಬಿ , ಮಾಜಿ ಶಾಸಕರಾದ ಸೊಗಡು ಶಿವಣ್ಣ , ನೇಮಿರಾಜ ನಾಯಕ್, ಜಗದೀಶ್ ಮೆಟಗುಡ್ಡ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಚ್.ಎಸ್.ಶಿವಯೋಗಿ ಸ್ವಾಮಿ, ಬಿಜೆಪಿ ಕಾರ್ಯದರ್ಶಿ ನಂದೀಶ್, ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ , ಮುಖಂಡ ಮುಕುಡಪ್ಪ ಸೇರಿದಂತೆ ಅನೇಕರು ಈಶ್ವರಪ್ಪ ವರ್ತನೆಗೆ ಅಸಮಾಧಾನಗೊಂಡಿದ್ದಾರೆ.   ವರಿಷ್ಠರ ಬಳಿ ನಡೆದ ಸಂಧಾನದಂತೆ ಈಗಾಗಲೇ ನೇಮಕಗೊಂಡಿರುವ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಕಾರ್ಯಕಾರಿಣಿ ಸಭೆ ನಡೆಯಬೇಕಿತ್ತು. ಈ ಸಭೆಯಲ್ಲಿ ಚರ್ಚಿಸಿ ಯಾವ ಯಾವ ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಬೇಕು ಎಂಬ ಬಗ್ಗೆ ವರದಿ ನೀಡಬೇಕಾಗಿತ್ತು. ಇದರ ಬಗ್ಗೆ ಈವರೆಗೂ ಈಶ್ವರಪ್ಪ ಚಕಾರವೆತ್ತಿಲ್ಲ. ಪದಾಧಿಕಾರಿಗಳ ಪಟ್ಟಿ ನೇಮಕಗೊಳ್ಳುತ್ತಿದ್ದಂತೆ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಕೆಜೆಪಿಯಿಂದ ವಲಸೆ ಬಂದವರಿಗೆ ಮಣೆ ಹಾಕಲಾಗಿದೆ ಎಂದು ಮೊದಲು ಅಪಸ್ವರ ತೆಗೆದಿದ್ದೇ ಈಶ್ವರಪ್ಪ .

ಅದರಲ್ಲೂ ತವರು ಜಿಲ್ಲೆ ಶಿವಮೊಗ್ಗ, ತುಮಕೂರು, ಮೈಸೂರು, ಚಾಮರಾಜನಗರ, ಬಳ್ಳಾರಿ, ಬೀದರ್, ಕಲಬುರ್ಗಿ, ಹಾವೇರಿ, ಧಾರವಾಡ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿಗೆ ಬದಲಾಗಲೇಬೇಕೆಂದು ಪಟ್ಟು ಹಿಡಿದಿದ್ದರು.   ಸಾಲದಕ್ಕೆ ಒಂದಿಷ್ಟು ಪಕ್ಷದ ಮುಖಂಡರನ್ನು ಎತ್ತಿಕಟ್ಟಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಪತ್ರವನ್ನು ಬರೆಯಲಾಗಿತ್ತು. ಅಲ್ಲದೆ ಬಿಎಸ್‍ವೈ ನಾಯಕತ್ವದ ವಿರುದ್ಧವೇ ಸೆಡ್ಡು ಹೊಡೆದು ಬಸವ ಕಲ್ಯಾಣದಲ್ಲಿ ಅದ್ಧೂರಿ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ನಡೆಸಲಾಯಿತು.

ಯಡಿಯೂರಪ್ಪನವರ ವಿರುದ್ಧ ಮಾತನಾಡಲು ಮೀನಾಮೇಷ ಎಣಿಸುತ್ತಿದ್ದ ಕೆಲವರು ಈಶ್ವರಪ್ಪನಿಗೆ ಬೆಂಬಲ ನೀಡಿ ಆ ಮೂಲಕವಾದರೂ ಅವರ ಏಕ ಚಕ್ರಾಧಿಪತ್ಯಕ್ಕೆ ಅಂಕುಶ ಹಾಕಬೇಕೆಂಬ ಲೆಕ್ಕಾಚಾರದಲ್ಲಿದ್ದರು. ಆದರೆ ವರಿಷ್ಠರು ಟಿಕೆಟ್ ನೀಡುವ ಭರವಸೆ ನೀಡುತ್ತಿದ್ದಂತೆ ನಮ್ಮನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ತಮ್ಮ ನೋವು ಹೊರಹಾಕಿದ್ದಾರೆ.   ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್‍ಮೂರ್ತಿ ಅವರನ್ನು ಪಕ್ಷದಿಂದಲೇ ಅಮಾನತುಪಡಿಸಲಾಗಿದೆ. ಇದೇ ರೀತಿ ಸೊಗಡು ಶಿವಣ್ಣ , ನಂದೀಶ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಈಶ್ವರಪ್ಪ ಚಕಾರವನ್ನೆತ್ತಿಲ್ಲ. ಅಮಾನತು ಆದೇಶ ವಾಪಸ್, ನೋಟಿಸ್ ಹಿಂಪಡೆಯಬೇಕೆಂದು ಅವರು ಒತ್ತಡ ಹಾಕಬೇಕಿತ್ತು. ಆದರೆ ಈವರೆಗೂ ಈ ಬಗ್ಗೆ ಮಾತನಾಡದಿರುವುದು ನೋವು ತಂದಿದೆ ಎಂದು ಹೆಸರು ಹೇಳಲಿಚ್ಛಿಸದ ಪ್ರಮುಖರೊಬ್ಬರು ಹೇಳಿದ್ದಾರೆ.

ನಾವು ಈಶ್ವರಪ್ಪನವರನ್ನು ನಂಬಿಕೊಂಡು ಯಡಿಯೂರಪ್ಪ ವಿರುದ್ಧ ಸಮರ ಸಾರಿದೆವು. ತಮ್ಮ ಸ್ವಾರ್ಥ ಸಾಧನೆಗಾಗಿ ರಾಯಣ್ಣ ಬ್ರಿಗೇಡ್ ಕಟ್ಟುತ್ತೇನೆಂದು ಮುಂದಾದರು. ಅಲ್ಲೂ ಕೂಡ ಯಶಸ್ವಿಯಾಗಲಿಲ್ಲ. ಪಕ್ಷದಲ್ಲಿ ಅವರಿಗೇನೊ ಸ್ಥಾನಮಾನ ಸಿಕ್ಕಿತು. ಈಗ ಬಿಎಸ್‍ವೈ ನಮ್ಮನ್ನು ಸುಮ್ಮನೆ ಬಿಡಲಿದ್ದಾರೆಯೇ? ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ.
ರಾಯಣ್ಣ ಬ್ರಿಗೇಡ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಸಂಘಟನೆಯಾಗುತ್ತಿಲ್ಲ. ಕಾಟಾಚಾರಕ್ಕೆಂಬಂತೆ ಇತ್ತೀಚೆಗೆ ಶಾಸಕರ ಭವನದಲ್ಲಿ ಸಭೆ ನಡೆಯಿತೇ ಹೊರತು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲಾಗಲಿಲ್ಲ. ಅತ್ತ ಪಕ್ಷ ನಿಷ್ಠರಾಗಿಯೂ ಉಳಿಯಲ್ಲಿಲ್ಲ. ಇತ್ತ ಈಶ್ವರಪ್ಪ ನಮ್ಮನ್ನು ಉಳಿಸಲಿಲ್ಲ. ಇನ್ನು ಪಕ್ಷದಲ್ಲಿ ಬಿಎಸ್‍ವೈ ಎದುರು ಹಾಕಿಕೊಂಡರೆ ಉಳಿಗಾಲವಿಲ್ಲ ಎಂದು ಬೆಂಬಲಿಗರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin