ಕಾಂಗ್ರೆಸ್ ಬಂಡಾಯ ನಾಯಕರ ಬಾಯಿಗೆ ಹೈಕಮಾಂಡ್’ನಿಂದ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

Congress-Ex-Leaders

ಬೆಂಗಳೂರು, ಮಾಚ್.1– ಕಾಂಗ್ರೆಸ್‍ನ ಬಂಡಾಯ ನಾಯಕರ ವಿರುದ್ಧ ಗರಂ ಆಗಿರುವ ಹೈಕಮಾಂಡ್ ಬಹಿರಂಗವಾಗಿ ಮಾತನಾಡದಂತೆ ಬಾಯಿಗೆ ಬ್ರೇಕ್ ಹಾಕಿದ್ದು ನಿಮ್ಮ ಅತೃಪ್ತಿ, ಅಸಮಾಧಾನಗಳು ಏನೇ ಇದ್ದರೂ ಅದನ್ನು ನಮ್ಮ ಬಳಿ ಹೇಳಿ ಎಂದು ಸೂಚಿಸಿದೆ.  ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯುವ ಹಿರಿಯ ನಾಯಕರ ಧೋರಣೆಗೆ ಕಡಿವಾಣ ಹಾಕಲು ಖುದ್ದು ಹೈಕಮಾಂಡ್ ಮಧ್ಯ ಪ್ರವೇಶಿಸಿದ್ದು ಬಂಡಾಯ ಹಿರಿಯ ನಾಯಕರಿಗೆ ದೂರವಾಣಿ ಮೂಲಕ ಗಪ್‍ಚುಪ್ ಆಗಿರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.  ಕಾಂಗ್ರೆಸ್ ಪಕ್ಷಕ್ಕೆ ಹೊರಗಿನವರಿಗಿಂತ ಒಳಗಿನವರ ಕಿರಿಕಿರಿಯೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪಕ್ಷದ ಹಿರಿಯ ನಾಯಕರು. ಒಂದು ಕಡೆ ಮಂಗಳೂರಿನಿಂದ ಜನಾರ್ಧನ ಪೂಜಾರಿ ಚಾಟಿ ಬೀಸಿದರೆ, ಮತ್ತೊಂದು ಕಡೆ ಮೈಸೂರಿನಿಂದ ಹೆಚ್. ವಿಶ್ವನಾಥ್ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ಇದರ ಮಧ್ಯೆ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಸಹ ಸಿದ್ದರಾಮಯ್ಯ ಹಾಗೂ ಕೆಲ ಸಚಿವರ ವಿರುದ್ಧ ಸಿಟ್ಟಾಗಿದ್ದಾರೆ.

ಇವರ ಕೋಪವನ್ನು ಶಮನ ಮಾಡಲು ಕೆಪಿಸಿಸಿ ವಿಫಲವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸುವಂತೆ ರಾಜ್ಯ ನಾಯಕರು ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ರೆಬಲ್ ಆಗಿರುವ ಹಿರಿಯ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಯಮ ಕಾಪಾಡಿಕೊಳ್ಳುವಂತೆ ಕೋರಿದ್ದಾರೆ. ಇದಕ್ಕೆ ನಾಯಕರೂ ಸಹ ಸ್ಪಂದಿಸಿದ್ದಾರೆ.

ಬಹಿರಂಗವಾಗಿ ಮಾತಾಡಬೇಡಿ:

ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಬ್ ನವಿ ಅಜಾದ್, ಹಿರಿಯ ಮುಖಂಡ ಜನಾರ್ಧನ ಪೂಜಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸುಧೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟದಲ್ಲಿದೆ. 2018ರಲ್ಲಿ ನಡೆಯುವ ಚುನಾವಣೆ ರಾಷ್ಟ್ರಮಟ್ಟದಲ್ಲಿ ಅತ್ಯಂತ ಮುಖ್ಯ ಹೀಗಾಗಿ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ದೂರುಗಳಿದ್ದರೆ ನೇರವಾಗಿ ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ. ನೀವು ವಾಗ್ದಾಳಿ ನಡೆಸುತ್ತಾ ಹೋದರೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರವಾಗುತ್ತದೆ. ಮತ್ತೊಬ್ಬ ನಾಯಕರಾದ ಜಾಫರ್ ಷರೀಫ್ ಅವರನ್ನು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಾಟೀಲ್ ಅವರು ದೂರವಾಣಿ ಮೂಲಕ ಚರ್ಚಿಸಿದ್ದಾರೆ.

ಎಚ್.ವಿಶ್ವನಾಥ್ ಅವರನ್ನು ಮನವೊಲಿಸುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವಿಶ್ವನಾಥ್‍ಗೆ ಕೆಪಿಸಿಸಿ ನೋಟೀಸ್ ನೀಡಿದ್ದು ಅದಕ್ಕೆ ಉತ್ತರಿಸುವಂತೆಯೂ ಸೂಚಿಸಿದೆ. ಒಟ್ಟಿನಲ್ಲಿ ಪಕ್ಷದ ವಿರುದ್ಧ ರೆಬಲ್ ಆಗಿರುವ ನಾಯಕರಿಗೆ ಹೈಕಮಾಂಡ್ ತಿದ್ದಿ ಬುದ್ದಿ ಹೇಳಿದೆ. ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾರಾ ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin