ಚೈತನ್ಯದಾಯಕ ದಾಳಿಂಬೆ

ಈ ಸುದ್ದಿಯನ್ನು ಶೇರ್ ಮಾಡಿ

Dalimbe--01

ಹಣ್ಣುಗಳ ವೈಶಿಷ್ಟ್ಯವೇ ಹಾಗೆ. ಸಾಕಷ್ಟು ರೀತಿಯಲ್ಲಿ ದೇಹಕ್ಕೆ ವಿಟಮಿನ್‍ಗಳನ್ನು ಒದಗಿಸುವ ಜೊತೆಗೆ ಇನ್ನಿತರ ಹಲವು ಉಪಯೋಗಗಳನ್ನು ಮಾಡುತ್ತವೆ. ಅವುಗಳಲ್ಲಿ ದಾಳಿಂಬೆ ಒಂದು ಕೈ ಮುಂದೆ ಇದೆ ಎಂದೇ ಹೇಳಬೇಕು. ಇದರ ಗುಣ ವಿಶೇಷಗಳನ್ನು ಕೇಳಿದರೆ ಅದರ ಬಹುಪಯೋಗ ತಿಳಿಯದೆ ಇರದು. ಯಾವುದೇ ರೋಗಕ್ಕೆ ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಆ ಕಾಲದಲ್ಲೇ ಸಿಹಿ ದಾಳಿಂಬೆಯನ್ನು ಸೇವಿಸುತ್ತಾ ಬಂದರೆ ಚಿಕಿತ್ಸೆ ಪಡೆಯುತ್ತಿರುವ ರೋಗದಿಂದ ಬಹು ಬೇಗ ಮುಕ್ತರಾಗಬಹುದು.  ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತಶಾಮಕ ಗುಣವುಳ್ಳದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಕ್ರಿಯೆಗೆ ಚೈತನ್ಯ ತಂದುಕೊಡುತ್ತದೆ ಹಾಗೂ ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಒಂದು ಊಟದ ಚಮಚ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಹಲವಾರು ಶರೀರ ಸಂಬಂಧ ರೋಗಗಳು ಗುಣವಾಗುತ್ತದೆ.

ಮಾನಸಿಕ ಒತ್ತಡ ಮತ್ತು ನರಗಳ ದೌರ್ಬಲ್ಯದಿಂದ ತಲೆದೋರುವ ತಲೆನೋವಿಗೆ ಇದು ಅತ್ಯುತ್ತಮ ಚಿಕಿತ್ಸೆ. ಈ ಹಣ್ಣಿನ ರಸ ದೃಷ್ಟಿ ದೋಷಗಳನ್ನು ನಿವಾರಿಸುವುದರಿಂದ ಎಲ್ಲೆಡೆ ದೊರೆಯುವ ದಾಳಿಂಬೆಯ ಸೇವನೆಯನ್ನು ನಿಯಮಿತವಾಗಿ ಮಾಡುವ ಅಭ್ಯಾಸ ಒಳ್ಳೆಯದು.   ದಾಳಿಂಬೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಅಗೆದು ನೀರಿನೊಂದಿಗೆ ಕುಡಿಯುವುದರಿಂದ ಆಮಶಂಕೆ, ಅತಿಸಾರ ಹತೋಟಿಗೆ ಬರುತ್ತದೆ. ದಾಳಿಂಬೆ ಹಣ್ಣಿನಿಂದ ಬೀಜಗಳನ್ನು ಸುಲಿದುಕೊಂಡ ನಂತರ ಉಳಿದಿರುವ ದಿಂಡು ಆಮಶಂಕೆ ಮತ್ತು ಅತಿಸಾರ ತಡೆಗಟ್ಟಲು ಸಿದ್ಧೌಷಧಿ. ದಿಂಡಿನ ಕಷಾಯವನ್ನು ಮೆಂತ್ಯದ ಕಷಾಯದೊಂದಿಗೆ ಮಿಶ್ರಣ ಮಾಡಿ ಜೇನುತುಪ್ಪದೊಂದಿಗೆ ಸೇವಿಸಿದರೆ ಆಮಶಂಕೆ ಗುಣವಾಗುತ್ತದೆ. ಈ ದಿಂಡಿನ ಕಷಾಯಕ್ಕೆ ಅಡುಗೆ ಉಪ್ಪುಸೇರಿಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು, ಬಾಯಿ ಹುಣ್ಣು ಗುಣವಾಗುತ್ತದೆ.

ದಾಳಿಂಬೆ ಚಿಗುರನ್ನು ಹಲ್ಲುಗಳಿಂದ ಅಗಿಯುವುದರಿಂದ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುತ್ತದೆ. ಹಲ್ಲುನೋವು ಕಡಿಮೆಯಾಗುತ್ತದೆ.   ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟಗಾಯಕ್ಕೆ ಲೇಪಿಸಿದರೆ ಉರಿ ಶಾಂತವಾಗುತ್ತದೆ. ಇದನ್ನು ಮೈಗೆ ಹಚ್ಚಿಕೊಂಡರೆ ಚರ್ಮ ರೋಗಗಳ ಕಾರಣ ದೇಹದಲ್ಲಿ ಹುಟ್ಟಿಕೊಳ್ಳುವ ದುರ್ಗಂಧ ನಿವಾರಣೆಯಾಗುತ್ತದೆ. ದಾಳಿಂಬೆಯನ್ನು ಸೌಂದರ್ಯವರ್ಧಕವಾಗಿಯೂ ಉಪಯೋಗಿಸಬಹುದು. ತಾಜಾ ದಾಳಿಂಬೆ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ರಕ್ತ ಶುದ್ಧವಾಗಿ ಚರ್ಮಕ್ಕೆ ಹೊಸ ಕಾಂತಿ ಲಭಿಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin