ಕಲ್ಲಿದ್ದಲು ಖರೀದಿಯಲ್ಲಿ ಕಾಂಗ್ರೆಸ್‍ನ ಪ್ರಭಾವಿ ಸಚಿವ ಕೈವಾಡ : ಬಿಜೆಪಿಯಿಂದ ಮತ್ತೊಂದು ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Sureshkumar

ಬೆಂಗಳೂರು,ಮಾ.2- ಕಲ್ಲಿದ್ದಲು ಖರೀದಿಯಲ್ಲಿ ಆಡಳಿತಾರೂಢ ಕಾಂಗ್ರೆಸ್‍ನ ಪ್ರಭಾವಿ ಸಚಿವರೊಬ್ಬರು ಶಾಮೀಲಾಗಿದ್ದು, ಇದು ಅವರ ಕೊರಳಿಗೆ ಉರುಳಾಗಿ ಪರಿಣಮಿಸಲಿದೆ ಎಂದು ಬಿಜೆಪಿ ಮತ್ತೊಂದು ಬಾಂಬ್ ಸಿಡಿಸಿದೆ.  ಐದು ಲಕ್ಷ ವರಮಾನ ಹೊಂದಿದವರು 5 ಸಾವಿರ ಕೋಟಿ ಕಲ್ಲಿದ್ದಲು ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ. ಇದರ ಬಗ್ಗೆ  ಸಮಗ್ರ ತನಿಖೆ ನಡೆಸಲು ಸಿಬಿಐ ಅಥವಾ ಇಡಿ ಇಂದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಸುರೇಶ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂಡೋನೆಶಿಯಾ ಕಂಪನಿಯಿಂದ ಕಲ್ಲಿದ್ದಲು ಖರೀದಿ ಮಾಡಲಾಗುತ್ತಿದ್ದು , ಇದರಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ.

ಪ್ರಭಾವಿ ಸಚಿವರೊಬ್ಬರು ಮೇಲ್ನೋಟಕ್ಕೆ ಶಾಮೀಲಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಸಿ.ಟಿ.ರವಿ ತಿಳಿಸಿದರು.   ಕೆಪಿಟಿಸಿಎಲ್‍ಗೆ ಸರಬರಾಜು ಮಾಡುವ ಕಲ್ಲಿದ್ದಲು ಖರೀದಿಯಲ್ಲಿ ಭಾರೀ ಮೊತ್ತದ ಕಿಕ್‍ಬ್ಯಾಕ್ ನಡೆದಿದೆ. ಇದು ಹೈಕಮಾಂಡ್‍ಗೋ ಅಥವಾ ಕೈ ಕಮಾಂಡಿಗೋ ಹೋಗುತ್ತಿರುವುದು ಗೊತ್ತಿಲ್ಲ. ಬೇನಾಮಿ ಹಣ ವಹಿವಾಟು  ಪ್ರಕರಣದಲ್ಲಿ ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತನಿಖೆಗೆ ಒತ್ತಾಯ:

ಸೌರ ವಿದ್ಯುತ್ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಿ ಹೆಬಾಳ್ಕರ್ ಅವರು ತಮ್ಮ ಸಂಬಂಕರ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿ ಸರ್ಕಾರದಿಂದ ವಿದ್ಯುತ್ ಗುತ್ತಿಗೆ ಪಡೆದಿದ್ದಾರೆಂದು ದೂರಿದರು.  ಒಟ್ಟು 300 ಮೆಗಾವ್ಯಾಟ್ ವಿದ್ಯುತ್ ಯೋಜನೆಯಲ್ಲಿ ಲಕ್ಷ್ಮಿ ಹೆಬಾಳ್ಕರ್ ಕುಟುಂಬಕ್ಕೆ 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುತ್ತಿಗೆ ನೀಡಲಾಗಿದೆ. ಸಹೋದರ, ತಾಯಿ ಹಾಗೂ ಸಂಬಂಕರ ಹೆಸರಿನಲ್ಲಿ ಕೇವಲ 59 ಸೆಕೆಂಡಿನೊಳಗೆ ಅರ್ಜಿ ಭರ್ತಿ ಮಾಡಿ ಗುತ್ತಿಗೆ ಪಡೆಯಲಾಗಿದೆ ಎಂದು ಆರೋಪಿಸಿದರು.

ಎಷ್ಟೇ ಅನುಭವಿಗಳಿದ್ದರೂ ಅರ್ಜಿ ತುಂಬಲು ಕನಿಷ್ಠ ಎರಡೂವರೆ ನಿಮಿಷ ಬೇಕು. ಲಕ್ಷ್ಮಿ ಹೆಬಾಳ್ಕರ್ ಸಹೋದರ ಕೇವಲ 59 ಸೆಕೆಂಡ್‍ನಲ್ಲಿ ಅರ್ಜಿ ತುಂಬಲು ಹೇಗೆ ಸಾಧ್ಯ. 15 ದಿನ ಮುಂಚಿತವಾಗಿಯೇ ಭೂಮಿ ಖರೀದಿಸಿ,ಒಂದು ವಾರದ ಮೊದಲು ಅರ್ಜಿ ಭರ್ತಿ ಮಾಡಲಾಗಿದೆ ಎಂದು ಹೇಳಿದರು.   ಲಕ್ಷ್ಮಿ ಹೆಬಾಳ್ಕರ್ ಒಂದೂವರೆ ಕೋಟಿ ಆದಾಯ ಘೋಷಿಸಿದ್ದಾರೆ. ಅಪೆಕ್ಸ್ ಬ್ಯಾಂಕ್‍ನಿಂದ ಅವರಿಗೆ 215 ಕೋಟಿ ರೂ. ಸಾಲ ನೀಡಲು ಹೇಗೆ ಸಾಧ್ಯ. ಇದರಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin