ಬೆಂಗಳೂರಲ್ಲಿ ಜೂನ್‍ವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-BBMP-Water

ಬೆಂಗಳೂರು, ಮಾ.2- ಜೂನ್‍ವರೆಗೂ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು. ವಿಧಾನಸೌಧದಲ್ಲಿಂದು ಬೇಸಿಗೆಯಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಕುರಿತಂತೆ ನಡೆದ ಸಭೆಯಲ್ಲಿ ತಿಳಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.   ಇದಕ್ಕೂ ಮುನ್ನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರಿನ ಖಾಸಗಿ ಬೋರ್‍ವೆಲ್ ಮತ್ತು ಟ್ಯಾಂಕರ್‍ಗಳನ್ನು ಮುಟ್ಟುಗೋಲು ಹಾಕಬೇಕೆಂದು ಶಾಸಕರು ಪಕ್ಷಾತೀತವಾಗಿ ಒತ್ತಾಯಿಸಿದರು.

ಜಲಾಶಯಗಳಲ್ಲಿ ನೀರಿಲ್ಲ, ಬೋರ್‍ವೆಲ್‍ಗಳು ಬತ್ತುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಬೋರ್‍ವೆಲ್ ಮತ್ತು ಟ್ಯಾಂಕರ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಶಾಸಕರು ಸಲಹೆ ಮಾಡಿದರು.  ಶಾಸಕ ಮುನಿರತ್ನ ಮಾತನಾಡಿ, ಖಾಸಗಿ ಕೊಳವೆ ಬಾವಿ ಟ್ಯಾಂಕರ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ನೀರು ಮಾರಾಟ ಮಾಡುವವರಿಗೆ ಮೀಟರ್ ಹಾಕಬೇಕು ಎಂದರು.  ಬಿಜೆಪಿ ಶಾಸಕ ಮುನಿರಾಜು ಮಾತನಾಡಿ, ಹೊರವಲಯದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ನಮ್ಮ ಕ್ಷೇತ್ರದಲ್ಲಿ ಕೆಲವು ಬೋರ್‍ವೆಲ್‍ಗಳು ಬತ್ತಿದ್ದರೆ, ಇನ್ನೂ ಕೆಲವು ಬೋರ್‍ವೆಲ್‍ಗಳಲ್ಲಿ ಅಲ್ಪಸ್ವಲ್ಪ ನೀರಿದೆ. ಒಂದು ಟ್ಯಾಂಕರ್ ನೀರಿಗೆ 400ರೂ.ವರೆಗೂ ದರ ವಿಧಿಸಲಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ವಾರಕ್ಕೆ ಎರಡು ಬಾರಿಯಾದರೂ ಕಾವೇರಿ ನೀರು ಕೊಡಿ ಎಂದು ಮನವಿ ಮಾಡಿದರು.  ಜೆಡಿಎಸ್‍ನ ಗೋಪಾಲಯ್ಯ ಮಾತನಾಡಿ, ತಿಪ್ಪಗೊಂಡನಹಳ್ಳಿ ಜಲಾಶಯ ಕಲುಷಿತ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಆ ಭಾಗದ ಬೋರ್‍ವೆಲ್‍ಗಳಿಗೆ ವಿಷಾನಿಲ ಸೇರ್ಪಡೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಟ್ಯಾಂಕರ್‍ಗಳನ್ನು ಒದಗಿಸಬೇಕಾಗುತ್ತದೆ ಎಂದು ಮನವಿ ಮಾಡಿದರು. ಕಾಂಗ್ರೆಸ್‍ನ ಎನ್.ಎ.ಹ್ಯಾರಿಸ್ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಕೆಲವು ಮನೆಗಳಿಗೆ ನೀರು ಬಂದರೆ ಮತ್ತೆ ಕೆಲವು ಮನೆಗಳಿಗೆ ನೀರು ಬರುವುದಿಲ್ಲ. ಈ ಸಮಸ್ಯೆ ಪರಿಹರಿಸಿ ಎಂದು ತಿಳಿಸಿದರು.

ಕುಪೇಂದ್ರರೆಡ್ಡಿ ಮಾತನಾಡಿ, ನಗರದ ಜನರಿಗೆ 25 ಲೀಟರ್ ನೀರು ಒದಗಿಸಿದರೂ ಸಹ ಎರಡೂವರೆ ದಶಲಕ್ಷ ಲೀಟರ್ ನೀರು ಬೇಕು. ತುರ್ತು ಸಂದರ್ಭದಲ್ಲಿ ಬಳಸಲು ಎರಡು ತಿಂಗಳ ಕಾಲ ಬೇಕಾಗುವಷ್ಟು ನೀರು ಸಂಗ್ರಹ ಮಾಡಬೇಕು. ಬೋರ್‍ವೆಲ್‍ಗಳ ನೀರಿನ ಶುದ್ಧತೆಯನ್ನು ಪ್ರಮಾಣೀಕರಿಸಬೇಕು ಎಂದು ತಿಳಿಸಿದರು.  ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲ ಕೊಳವೆ ಬಾವಿಗಳನ್ನೂ ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಬೇಕು. ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತಗೊಳಿಸಬಾರದು ಎಂದು ತಿಳಿಸಿದರು.   ಅಧ್ಯಕ್ಷತೆ ವಹಿಸಿದ್ದ ಜಾರ್ಜ್ ಮಾತನಾಡಿ, ಬೆಂಗಳೂರಿನ ಕೋರ್ ಏರಿಯಾದಲ್ಲಿ ಒಂದು ಸಾವಿರ ಕೊಳವೆ ಬಾವಿ ಕೊರೆಯಲು ಉದ್ದೇಶಿಸಲಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin