ಉತ್ತರಪ್ರದೇಶದಲ್ಲಿ 6ನೇ ಹಂತದ, ಮಣಿಪುರ ಮೊದಲ ಹಂತದ ಮತದಾನ ಸುಗಮ

ಈ ಸುದ್ದಿಯನ್ನು ಶೇರ್ ಮಾಡಿ

Manipur--02

ಲಕ್ನೋ, ಮಾ.4-ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಆರನೇ ಹಂತ ಹಾಗೂ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಹಂತ ವಿಧಾನಸಭಾ ಚುನಾವಣೆಗೆ ಇಂದು ವ್ಯಾಪಕ ಬಂದೋಬಸ್ತ್‍ನೊಂದಿಗೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಎರಡೂ ರಾಜ್ಯಗಳ ಮತದಾನ ಶಾಂತಿಯುತವಾಗಿತ್ತು. ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಪ್ರತಿನಿಧಿಸಿರುವ ಅಜಂಗಡ ಲೋಕಸಭಾ ವ್ಯಾಪ್ತಿಯಲ್ಲಿರುವ 10 ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ 7 ಜಿಲ್ಲೆಗಳ 49 ಸ್ಥಾನಗಳಿಗೆ ಮತದಾನ ನಡೆಯಿತು.

ಆರನೇ ಹಂತದಲ್ಲಿ 60 ಮಹಿಳೆಯರೂ ಸೇರಿದಂತೆ ಒಟ್ಟು 635 ಸ್ಪರ್ಧಿಗಳು ಕಣದಲ್ಲಿದ್ದು, ಇವರಲ್ಲಿ 160 ಮಂದಿ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಅಲ್ಲದೆ 126 ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹುರಿಯಾಳುಗಳಾಗಿದ್ದಾರೆ.  17,926 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1.72 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬಿಜೆಪಿಯ ಫೈರ್‍ಬ್ರಾಂಡ್ ನಾಯಕರಾದ ಯೋಗಿ ಆದಿತ್ಯನಾಥ್ ಮತ್ತು ಮಾವು ಹಾಗೂ ಅಪರಾಧ ಹಿನ್ನೆಲೆ ಹೊಂದಿರುವ ಮುಖ್ತಾರ್ ಅನ್ಸಾರಿ ಸೇರಿದಂತೆ ಕೆಲವು ಘಟಾನುಘಟಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳನ್ನು ಸೇರಿದೆ.

ಮಣಿಪುರದಲ್ಲಿ ಬಿರುಸಿನ ಮತದಾನ :

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಬಿರುಸಿನ ಮತದಾನವಾಗಿದೆ. ಶಾಂತಿಯುತ ಮತದಾನಕ್ಕಾಗಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು.
ಏಳು ಜಿಲ್ಲೆಗಳ 38 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 1,487 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 168 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 19,02,562 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.   ಈಶಾನ್ಯ ಭಾರತದ ರಾಜ್ಯದಲ್ಲಿ ಮತದಾನದ ವೇಳೆ ಬಂಡುಕೋರರಿಂದ ಅಡಚಣೆಯಾಗುವುದನ್ನು ತಪ್ಪಿಸಲು ಬಿಗಿ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin