189 ಕ್ಕೆ ಭಾರತ ಆಲ್ ಔಟ್, ರಾಹುಲ್ ಶ್ರಮ ವ್ಯರ್ಥ

ಈ ಸುದ್ದಿಯನ್ನು ಶೇರ್ ಮಾಡಿ

Rahull--02

ಬೆಂಗಳೂರು, ಮಾ.4-ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್‍ಏರ್ ವ್ಯವಸ್ಥೆ ಅಳವಡಿಸಿದ ಬಳಿಕ ಮೊಟ್ಟಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯ ಇಂದು ಸಾಕ್ಷಿಯಾಯಿತು.  ನಥನ್ ಲಾಯನ್ 50ಕ್ಕೆ 8 ಜೀವನ ಶ್ರೇಷ್ಠ ಬೌಲಿಂಗ್‍ಗೆ ದಾಳಿಗೆ ತತ್ತರಿಸಿದ ಭಾರತ 189 ರನ್‍ಗೆ ಆಲೌಟ್ ಆಯಿತು.   ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಆರಂಭವಾದ 2ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹಲ್(90) ಅವರ ಉತ್ತಮ ಪ್ರದರ್ಶನ ನೀಡಿದರಾದರೂ ಆಸೀಸ್‍ನ ಸ್ಪಿನ್ ದಾಳಿಗೆ ಕಂಗೆಟ್ಟ ಟೀಂ ಇಂಡಿಯಾ ತನ್ನ ಎಲ್ಲ ವಿಕೆಟ್‍ಗಳನ್ನು ಕಡಿಮೆ ಮೊತ್ತ ಪೇರಿಸಿತು. ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಕೊಹ್ಲಿಯ ಲೆಕ್ಕಾಚಾರ ಬುಡಮೇಲು ಮಾಡಿದ ನಥನ್ ಲೇನ್, ತನ್ನ ಸ್ಪಿನ್ ದಾಳಿಯಿಂದ ಹೆಚ್ಚು ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್‍ನಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದರು.

ವಿಜಯ್ ಬದಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಜೊತೆ ಆರಂಭಿಕವಾಗಿ ಕಣಕ್ಕಿಳಿದ ಅಭಿನವ್ ಮುಕುಂದ ಇನ್ನಿಂಗ್ಸ್‍ನ 3 ಓವರ್‍ನಲ್ಲೇ ಸೊನ್ನೆ ಸುತ್ತಿ ಸ್ಟಾರ್ಕ್ ಬೌಲಿಂಗ್‍ನಲ್ಲೇ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದು ಔಟಾಗಿ ಭಾರೀ ನಿರಾಸೆ ಮೂಡಿಸಿದರು.  ಹೀಗಾಗಿ ಅತಿಥೇಯರ ಆರಂಭದಲ್ಲೇ ಆಘಾತ ಅನುಭವಿಸಿತು. ಈ ನಡುವೆ ಕ್ರೀಸ್‍ಗೆ ಬಂದ ಚೇತೇಶ್ವರ ಪೂಜಾರ್ ನಿಧಾನ ಆಟಕ್ಕೆ ಮೊರೆ ಹೋಗಿ ಆಸೀಸ್ ಬೌಲರ್‍ಗಳು ಸಮರ್ಥವಾಗಿ ಎದುರಿಸಿದರು. ಆದರೆ ಇವರಿಬ್ಬರ ಆಟವು ಹೆಚ್ಚು ಹೊತ್ತು ನಡೆಯಲಿಲ್ಲ. ರಾಹುಲ್ ಸಾಥ್ ತೆಗೆದುಕೊಂಡ ಪೂಜಾರ್ 66 ಎಸೆತಗಳಲ್ಲಿ 17 ರನ್ ಸೇರಿಸಿ 2ನೆ ವಿಕೆಟ್ ಜೊತೆಯಾಟದಲ್ಲಿ ತಂಡಕ್ಕೆ 60 ರನ್ ದಾಖಲಿಸಿದರು.  ಕ್ರೀಸ್‍ಗೆ ನೆಲೆಯೂರಲು ಯತ್ನಿಸುತ್ತಿದ್ದಾಗ ಪೂಜಾರ್ (17) ರನ್‍ಗೆ ಲಾಯನ್ ಬೌಲಿಂಗ್‍ನಲ್ಲಿ ಹ್ಯಾಂಡ್ಸ್‍ಕಂಬ್‍ಗೆ ಕ್ಯಾಚಿತ್ತು ನಿರ್ಗಮಿಸಿದರು.

ರಾಹುಲ್ ಅರ್ಧಶತಕ:

ಕಳೆದ ಟೆಸ್ಟ್‍ನಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ ಭಾರೀ ನಿರಾಸೆ ಅನುಭವಿಸಿದ ರಾಹುಲ್ ಆರಂಭದಲ್ಲೇ ಎಚ್ಚರಿಕೆ ಆಟವಾಡಿದರು. ಇನ್ನಿಂಗ್ಸ್‍ನ 2.5 ಓವರ್‍ನಲ್ಲಿ ತಂಡದ ಮೊತ್ತ 11 ರನ್ ಆಗಿದ್ದಾಗ ಮುಕುಂದ್ ಔಟ್ ಆದರು. ಆದರೆ ಧೃತಿಗೆಡದೆ ರಾಹುಲ್ ಅವರು ಪೂಜಾರ್‍ನ (17) ಅಗತ್ಯ ಸಾಥ್ ತೆಗೆದುಕೊಂಡರು ಆಕರ್ಷಕ ಅರ್ಧಶತಕ ದಾಖಲಿಸಿದರು.  ಮೊದಲ ಎರಡು ದಿನಗಳಲ್ಲಿ ವೇಗಿಗಳಿಗೆ ನೆರವಾಗುವ ಪಿಚ್ ಬಗ್ಗೆ ಅಪಾಯ ಅರಿತು ತವರಿನ ಅಭಿಮಾನಿಗಳ ಸಹಾಯ ಪಡೆದು ಸಮಯೋಚಿತ ಆಟಕ್ಕೆ ಭಾರತ ಮುಂದಾಯಿತು. ನಿಧಾನ, ಎಚ್ಚರಿಕೆ ಆಟವಾಡಿದ ರಾಹುಲ್ ಸಿಲ್ಲಿ ಪಾಯಿಂಟ್ ಕವರ್ ಡ್ರೈವ್ ಮೂಲಕ 8 ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದರು.

ಮೊದಲ ಟೆಸ್ಟ್‍ನಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ಕೊಹ್ಲಿ ಕೇವಲ 12 ರನ್ ಬಾರಿಸಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದು ಔಟಾದರು.   ಇದಾದ ಬಳಿಕ ಕ್ರೀಸ್‍ಗಿಳಿದ ರಹಾನೆ (17) 4ನೇ ವಿಕೆಟ್ ಜೊತೆಯಾಟದಲ್ಲಿ 30 ರನ್ ಸೇರಿಸಿ ಪೆವಿಲಿಯನ್ ಸೇರಿದರು. ಟೆಸ್ಟ್‍ನಲ್ಲಿ ಕಳಪೆ ಫಾರ್ಮ್‍ನಲ್ಲಿರುವ ರಹಾನೆ ಈ ಪಂದ್ಯದಲ್ಲೂ ಕೂಡ ಕಳಪೆ ಪ್ರದರ್ಶನ ನೀಡಿದರು. ಇತ್ತ ಭಾರತ ಒಂದೊಂದೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ರಾಹುಲ್ ತಾಳ್ಮೆಯ ಆಟವಾಡಿ 200 ಎಸೆತಗಳಲ್ಲಿ 90 ರನ್ ಗಳಿಸಿ ಶತಕ ವಂಚಿತರಾದರು.  ಭರವಸೆ ಮೂಡಿಸಿದ ನಾಯರ್: ಬೆಂಗಳೂರಿನ ಟೆಸ್ಟ್ ಪಂದ್ಯಕ್ಕೆ ಅದ್ಭುತ ಫಾರ್ಮ್‍ನಲ್ಲಿರುವ ಕರುಣ್ ನಾಯರ್ ಚಾನ್ಸ್ ಕೊಡಬೇಕೆಂದು ಪರ-ವಿರೋಧ ಮಾತುಗಳು ಕೇಳಿಬಂದಿತ್ತು. ಈ ನಡುವೆ ಸ್ಪಿನರ್ ಜಯಂತ್ ಯಾದವ್ ಬದಲಿಗೆ ಕರುಣ್ ನಾಯಕರ್ ಕಣಕ್ಕಿಳಿದಿದ್ದು , 5ನೇ ವಿಕೆಟ್ ಜೊತೆಯಾಟದಲ್ಲಿ 38 ರನ್ ಸೇರಿಸಿದರು. 26 ರನ್ ಗಳಿಸಿ ಭರವಸೆ ಮೂಡಿಸಿದ ನಾಯರ್ ಸ್ಟೀವ್ ಓ ಕೆಫಿ ಅವರ ಬೌಲಿಂಗ್‍ಗೆ ಸ್ಟಂಪ್ ಔಟಾದರು.

ನಾಯರ್ ಔಟಾದ ಬಳಿಕ ಕೇವಲ 15 ರನ್‍ಗಳ ಅಂತರದಲ್ಲಿ ಭಾರತದ ಕೆಳ ಕ್ರಮಾಂಕದ ಐವರು ಬ್ಯಾಟ್ಸ್‍ಮನ್‍ಗಳು ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಸೇರಿದರು.
ರವಿಚಂದ್ರನ್ ಅಶ್ವಿನ್ 7, ಸಹಾ 1, ಜಡೇಜ 3, ಇಶಾಂತ್ ಶರ್ಮ ಶೂನ್ಯ ಸಂಪಾದಿಸಿ ಔಟಾದರು.   ಅಂತಿಮವಾಗಿ ಭಾರತ 71.2 ಓವರ್‍ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 189 ರನ್ ದಾಖಲಿಸಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin