ಪಿಯು ಪರೀಕ್ಷೆ : ಮುಂಜಾಗ್ರತೆಯಾಗಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳನ್ನು ಬಂಧಿಸುವಂತೆ ಇಲಾಖೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

PUC--Question-Papers

ಬೆಂಗಳೂರು, ಮಾ.4-ಕಳೆದ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಜೈಲು ಪಾಲಾಗಿದ್ದ ಆರೋಪಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಬೇಕೆಂದು ಗೃಹ ಇಲಾಖೆಗೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರ ಬರೆದಿದೆ. ಇದೇ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಯಾವುದೇ ರೀತಿಯ ಗೊಂದಲ, ಅಕ್ರಮಗಳಿಗೆ ಅವಕಾಶವಿಲ್ಲದೆ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕಾದರೆ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಗಳನ್ನು ಬಂಧಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆರೋಪಿಗಳು ಸಾಕಷ್ಟು ಪ್ರಭಾವಿಗಳಾಗಿದ್ದಾರೆ. ಅವರಿಗೆ ಸರ್ಕಾರದ ವಿವಿಧ ಹಂತದಲ್ಲಿ ಸಾಕಷ್ಟು ಸಂಪರ್ಕವಿರುವುದರಿಂದ ಪುನಃ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಸಂಭವವಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿಯೇ ಬಂಧಿಸಬೇಕೆಂದು ಕೋರಲಾಗಿದೆ.  ಪ್ರಮುಖ ಆರೋಪಿ ಶಿವಕುಮಾರ್, ಆತನ ಪುತ್ರ ದಿನೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಿವಕುಮಾರ್, ಸಿಬ್ಬಂದಿ ಗಳಾದ ರುದ್ರಪ್ಪ, ಕೆ.ಎಸ್.ಅನಿಲ್‍ಕುಮಾರ್, ಕುಮಾರಸ್ವಾಮಿ, ಮುರಳೀಧರ್, ದೈಹಿಕ ಶಿಕ್ಷಕರಾದ ಸತೀಶ್, ಮಂಜುನಾಥ್ ಸೇರಿದಂತೆ ಒಟ್ಟು 14 ಮಂದಿಯನ್ನು ಬಂಧಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಸಚಿವಾಲಯದಲ್ಲಿ ಸಾಕಷ್ಟು ಸಂಪರ್ಕಗಳನ್ನಿಟ್ಟುಕೊಂಡಿರುವ ಇವರು ಹೊರಗಿದ್ದರೆ ಪ್ರಶ್ನೆಪತ್ರಿಕೆಗಳನ್ನು ಯಾವುದೇ ರೀತಿಯಲ್ಲಿ ಸೋರಿಕೆ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತೆ ಸಮಸ್ಯೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಬಂಧಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.  ಈಗಾಗಲೇ ಇದರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ (ಕೊಕಾ ಕಾಯ್ದೆ)ಯಡಿ ಬಂಧಿಸಲಾಗಿದೆ. ಈ ಕಾಯ್ದೆ ಪ್ರಕಾರ ಯಾವುದೇ ಆರೋಪಿಗಳನ್ನು ಬಂಧಿಸಿದರೆ ಕನಿಷ್ಠ ಪಕ್ಷ 2 ವರ್ಷ ಜಾಮೀನು ನೀಡಲು ಅವಕಾಶವಿರುವುದಿಲ್ಲ. ಆದರೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಆರೋಪಿಗಳು ಕಳೆದ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುತ್ತಾ ಬಂದಿದ್ದಾರೆ. ತಮಗಿರುವ ಸಂಪರ್ಕಜಾಲಗಳನ್ನು ಬಳಸಿಕೊಂಡು ಕೈಚಳಕ ತೋರಬಹುದು. ತಕ್ಷಣವೇ ಬಂಧಿಸಿದರೆ ಯಾವುದೇ ರೀತಿ ಸಮಸ್ಯೆಯಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.

ಬಂಧನಕ್ಕೆ ಸಿದ್ದತೆ:

ಪೊಲೀಸ್ ಮೂಲಗಳ ಪ್ರಕಾರ ಆಯುಕ್ತರ ಮನವಿಯಂತೆ ಈ ಎಲ್ಲಾ ಆರೋಪಿಗಳನ್ನು ಬಂಧಿಸಲು ಗೃಹ ಇಲಾಖೆ ಸಜ್ಜಾಗಿದೆ. ಯಾವುದೇ ಸಂದರ್ಭದಲ್ಲೂ ವಶಕ್ಕೆ ಪಡೆಯುವ ಸಂಭವವಿದೆ ಎಂದು ತಿಳಿದುಬಂದಿದೆ.  ಈಗಾಗಲೇ ಇವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಶೀಘ್ರದಲ್ಲೇ ಖೆಡ್ಡಕ್ಕೆ ಬೀಳಿಸಲು ಪೊಲೀಸರು ಸಜ್ಜಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin