ವಾರಣಾಸಿಯಲ್ಲಿ ಮೋದಿ ಹೈವೋಲ್ಟೆಜ್ ರೋಡ್ ಶೋ, ರಂಗೇರಿದ ಪ್ರಚಾರ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

Modi-Rally-1

ವಾರಣಾಸಿ, ಮಾ.4-ಉತ್ತರಪ್ರದೇಶದ ದೇವಾಲಯ ನಗರಿ ವಾರಣಾಸಿ ಇಂದು ಅಕ್ಷರಶಃ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಇಡೀ ಕೇಂದ್ರ ಸರ್ಕಾರ ಇಂದು ವಿಶ್ವನಾಥನ ಸನ್ನಿಧಿಯಲ್ಲಿ ಬೀಡುಬಿಟ್ಟಿತ್ತು. ಮಾ.8ರಂದು ನಡೆಯುವ ಅಂತಿಮ ಮತ್ತು 7ನೇ ಹಂತ ಚುನಾವಣೆಗಾಗಿ ರಾಷ್ಟ್ರ ರಾಜಕಾರಣ ರಾಜಧಾನಿ ದೆಹಲಿಯಿಂದ ವಾರಣಾಸಿಗೆ ಸ್ಥಳಾಂತರಗೊಂಡಿದ್ದು ವಿಶೇಷ.  ಒಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಹೈವೋಲ್ಟೆಜ್ ರೋಡ್ ಶೋ ನಡೆಸಿದರು. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿಕೂಟದಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಬ್ಬರದ ಪ್ರಚಾರ ನಡೆಸಿದರು. ಮತ್ತೊಂದೆಡೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಬೃಹತ್ ರ್ಯಾಲಿ ನಡೆಸಿದರು.

Modi 2
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿರುವ ಉತ್ತರಪ್ರದೇಶದ ಚುನಾವಣೆಯ ಅಂತಿಮ ಹಂತದ ಮತದಾನಕ್ಕೆ ಮುನ್ನ ದೇವಾಲಯ ನಗರಿ ಅತಿರಥ-ಮಹಾರಥರ ಬಲಾಬಲ ಪ್ರದರ್ಶನದೊಂದಿಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು.   ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಪಾರ ಬೆಂಬಲಿಗರೊಂದಿಗೆ ವಾರಣಾಸಿಗೆ ಆಗಮಿಸಿದಾಗ ಭಾರೀ ಸಂಖ್ಯೆಯ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ‘ಹರ್ ಹರ್ ಮೋದಿ, ಘರ್ ಘರ್ ಮೋದಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು.  ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ರೋಡ್ ಶೋ ಆರಂಭಿಸುವುದಕ್ಕೂ ಮುನ್ನ ಮೋದಿ ಭಾರತರತ್ನ ಮದನ ಮೋಹನ ಮಾಳವೀಯ ಪುತ್ಥಳಿಗೆ ಗೌರವ ಸಮರ್ಪಿಸಿದರು. ನಂತರ ಪುಷ್ಪಾಲಂಕೃತ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಚಿವ ಸಂಪುಟ ಸಚಿವರು ರೋಡ್ ಶೋನಲ್ಲಿ ಪ್ರಧಾನಿಗೆ ಸಾಥ್ ನೀಡಿದರು.

Modi 3

ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಕಾರ್ಯಕರ್ತರ ಜಯಘೋಷ ಮಾರ್ದನಿಸಿತು. ಎಲೆಲ್ಲೂ ಕಮಲದ ಲಾಂಛನವಿರುವ ಧಜ್ವಗಳು ರಾರಾಜಿಸಿ ಕೇಸರಿಮಯ ವಾತಾವರಣ ಸೃಷ್ಟಿಯಾಗಿತ್ತು.   ಬೃಹತ್ ಜನಸ್ತೋಮದೊಂದಿಗೆ ಮೆರವಣಿಗೆ ಮೂಲಕ ಸಾಗಿ ಬಂದ ಮೋದಿ ವಿಶ್ವವಿಖ್ಯಾತ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕಾಲ ಭೈರವೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ಸ್ವಕ್ಷೇತ್ರ ವಾರಣಾಸಿ ಮೋದಿಗೆ ಪ್ರತಿಷ್ಠೆಯ ಕಣವಾಗಿದ್ದು, ಮತದಾನಕ್ಕೆ ಮುನ್ನವೇ ಭಾರೀ ಬೆಂಬಲ ಕಂಡುಬಂದಿದೆ.

ನಂತರ ನಡೆದ ರಾಲ್ಯಿಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಮಾ.11ರ ಫಲಿತಾಂಶದ ನಂತರ ಈ ಮೂರು ಪಕ್ಷಗಳಿಗೆ ವಿದ್ಯುದಾಘಾತವಾಗಿಲಿದೆ ಎಂಬ ಮಾತನ್ನು ಅವರು ಪುನರುಚ್ಚರಿಸಿದರು.

 

Modi

ರಾಹುಲ್-ಅಖಿಲೇಶ್ ಬಿರುಸಿನ ಪ್ರಚಾರ : 

ಇದೇ ವೇಳೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿಕೂಟದಿಂದ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅಬ್ಬರದ ಪ್ರಚಾರ ನಡೆಸಿದರು. ಎರಡು ಪಕ್ಷಗಳ ಅಪಾರ ಸಂಖ್ಯೆಯ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.   ಈಗಾಗಲೇ ಉತ್ತರಪ್ರದೇಶದ ವಿವಿಧೆಡೆ ರೋಡ್ ಶೋ ನಡೆಸಿರುವ ಈ ಜೋಡಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿತು.  ವಾರಣಾಸಿಯಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ನೇತೃತ್ವದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಸಹ ನಡೆಯಿತು. ತಮ್ಮ ಪಕ್ಷವು 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

 

Facebook Comments

Sri Raghav

Admin