ವೇತನ ತಾರತಮ್ಯ ನಿವಾರಿಸದಿದ್ದರೆ ಯುಸಿ ಮೌಲ್ಯಮಾಪನ ಬಹಿಷ್ಕಾರ, ಉಪನ್ಯಾಸಕರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Evaluation--01

ಬೆಂಗಳೂರು, ಮಾ.4-ಸರ್ಕಾರ ವೇತನ ತಾರತಮ್ಯ ನಿವಾರಿಸದಿದ್ದರೆ ಪಿಯುಸಿ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಲಾಗುವುದು ಎಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಎಚ್ಚರಿಕೆ ನೀಡಿದೆ. ಕಳೆದ ವರ್ಷ 18 ದಿನಗಳ ಕಾಲಉಪನ್ಯಾಸಕರು ಪಿಯು ಮೌಲ್ಯಮಾಪನ ಬಹಿಷ್ಕರಿಸಿದ್ದರಿಂದ ಸರ್ಕಾರ ಪರದಾಡಿತ್ತು. ವಿದ್ಯಾರ್ಥಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದರು. ಪಿಯು ವಿದ್ಯಾರ್ಥಿಗಳ ಫಲಿತಾಂಶದಲ್ಲೂ ವಿಳಂಬವಾಯಿತು. ಆಗ ಹಲವಾರು ಸುತ್ತಿನ ಸಭೆ ನಡೆಸಿದ ಸರ್ಕಾರ ಸಂಧಾನ ಮಾಡಿ ಎರಡು ವೇತನ ಬಡ್ತಿ ನೀಡುವ ಭರವಸೆ ಕೊಟ್ಟಿತ್ತು. ಆ ಮೂಲಕ ಸೌಹಾರ್ದಯುತವಾಗಿ ಮೌಲ್ಯಮಾಪನ ಬಹಿಷ್ಕಾರದ ತೊಂದರೆಯನ್ನು ಬಗೆಹರಿಸಿತ್ತು.

ಈ ಬಾರಿ ಈ ಹಿಂದೆ ನೀಡಿದ್ದ ಭರವಸೆಯಂತೆ ಎರಡು ವೇತನ ಬಡ್ತಿಯನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಪನ್ಯಾಸಕರು ನಗರದ ಆನಂದ್‍ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾರಂಭಿಸಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ  ಸಚಿವರು, ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಭೆ ನಡೆದಿದ್ದು, ಸರ್ಕಾರ 7ನೆ ವೇತನ ಆಯೋಗ ಜಾರಿಮಾಡುವುದಾಗಿ ತಿಳಿಸಿದೆ. ಸರ್ಕಾರ ವೇತನ ಆಯೋಗ ಜಾರಿ ಮಾಡುವುದರಿಂದ ನಮ್ಮ ಸಮಸ್ಯೆ ನಿವಾರಣೆಯಾಗುವುದಿಲ್ಲ. ಮೊದಲು ಈ ಹಿಂದೆ ನೀಡಿದ್ದ ಭರವಸೆಯಂತೆ ಎರಡು ವೇತನ ಬಡ್ತಿಯನ್ನು ನೀಡಿ ತಾರತಮ್ಯ ನಿವಾರಿಸಬೇಕು. ನಂತರ ಆಯೋಗ ಜಾರಿಗೊಳಿಸಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಈಗಾಗಲೇ ನಾಲ್ಕು ಹಂತದ ಹೋರಾಟ ನಡೆಸಲಾಗಿದೆ. ಅದರಲ್ಲಿ ಪ್ರಥಮ ಹಂತದಲ್ಲಿ ಜಿಲ್ಲಾ ಮಟ್ಟದ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಡಿಸೆಂಬರ್‍ನಲ್ಲೇ ಮನವಿ ಸಲ್ಲಿಸಿದ್ದಾರೆ . ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಕಪ್ಪು ಪಟ್ಟಿ ಧರಿಸಿ ನಡೆಸಲಾಗಿದೆ. ಮೂರನೇ ಹಂತದಲ್ಲಿ ಇಂದು ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ನಾಲ್ಕನೇ ಹಂತದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕಪ್ಪು ಪಟ್ಟಿ ಧರಿಸಿ ನಡೆಸುತ್ತೇವೆ. ಪ್ರತಿಭಟನೆಯಿಂದ ಪರೀಕ್ಷೆಗಳಿಗೆ ತೊಂದರೆಯಾಗದಂತÉ ಕೆಲಸ ಮಾಡುತ್ತೇವೆ. ಆಗಲೂ ಸರ್ಕಾರ ತನ್ನ ಬಿಗಿ ಪಟ್ಟು ಬಿಡದೆ ಹೋದರೆ ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಠರಿಸುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಮಾ.19 ರಂದು ಜಂಟಿ ಸಮಿತಿ ಸಭೆ ಕರೆಯಲಾಗಿದೆ. ಅಂದು ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.  ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮೌಲ್ಯಮಾಪನ ಬಹಿಷ್ಕರಿಸುವ ಶಿಕ್ಷಕರಿಗೆ 5 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ನಾವು ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ರಾಜ್ಯಾದ್ಯಂತ ಇರುವ 30 ಸಾವಿರ ಉಪನ್ಯಾಸಕರು ಜೈಲಿಗೆ ಹೋಗಲು ಸಿದ್ಧ ಎಂದು ಘೋಷಣೆಗಳನ್ನು ಕೂಗಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin