ಜಮ್ಮು-ಕಾಶ್ಮೀರ : ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರ ಹತ್ಯೆ, ಪೊಲೀಸ್ ಪೇದೆ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Encounter-----0252'

ಶ್ರೀನಗರ, ಮಾ.5-ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ಮತ್ತೆ ತೀವ್ರಗೊಂಡಿದೆ. ದಕ್ಷಿಣ ಕಾಶ್ಮೀರದ ತ್ರಾಲ್‍ನ ವಸತಿ ಕಟ್ಟಡವೊಂದರಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಎನ್‍ಕೌಂಟರ್‍ನಲ್ಲಿ ಮೂವರು ಉಗ್ರಗಾಮಿಗಳು ಹತನಾಗಿದ್ದು, ಕೆಲವು ಯೋಧರಿಗೆ ಗಾಯಗಳಾಗಿವೆ. ತ್ರಾಲ್‍ನ ಶಿಖರ್‍ಗಾಹ್‍ನ ಕಟ್ಟಡದಲ್ಲಿ ಅವಿತಿರುವ ಮೂವರು ಹಿಜ್‍ಬುಲ್ ಮುಜಾಹಿದ್ದೀನ್ ಉಗ್ರರನ್ನು ಮಟ್ಟ ಹಾಕಲು ಯೋಧರು ಮತ್ತು ಪೊಲೀಸರು ನಿನ್ನೆಯಿಂದ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಗ್ರೆನೇಡ್ ಎಸೆದು ಸ್ಫೋಟ ನಡೆಸಿದ ನಂತರ ಎನ್‍ಕೌಂಟರ್ ನಡೆಯಿತು.

ಈ ಕಾಳಗದಲ್ಲಿ ಮಂಜೂರ್ ಅಹಮದ್ ಎಂಬ ಪೊಲೀಸ್ ಪೇದೆ ಹುತಾತ್ಮರಾಗಿ ಭದ್ರತಾಪಡೆಯ ಮೂವರು ಯೋಧರು ಗಾಯಗೊಂಡರು. ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.  ಎನ್‍ಕೌಂಟರ್‍ನಲ್ಲಿ ನಾವು ಪೊಲೀಸ್ ಪೇದೆಯನ್ನು ಕಳೆದುಕೊಂಡಿದ್ದೇವೆ. ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ನಿಗ್ರಹಿಸುವಲ್ಲಿ ಇವರು ಅಪ್ರತಿಮ ಸಾಹಸ ಪ್ರದರ್ಶಿಸಿ ಹುತಾತ್ಮರಾದರು. ಅವರ ಧೈರ್ಯ ಮತ್ತು ಸಾಹಸ ಶ್ಲಾಘನೀಯ ಎಂದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳು ಪಾಕಿಸ್ತಾನಕ್ಕೆ ಸೇರಿವೆ ಎಂಬುದು ದೃಢಪಟ್ಟಿದೆ.

ಕಾಶ್ಮೀರ ಕಣಿವೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಉಗ್ರನೊಬ್ಬ ಪೊಲೀಸ್ ಚೌಕಿ ಮೇಲೆ ದಾಳಿ ನಡೆಸಿ ಸಬ್‍ಇನ್ಸ್‍ಪೆಕ್ಟರ್ ಬಳಿಯಿದ್ದ ಎಕೆ-47 ಬಂದೂಕು ಅಪಹರಿಸಿ ಪರಾರಿಯಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin