ಕಲ್ಲಿದ್ದಲು ಖರೀದಿ ಹಗರಣ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿಗೆ ಡಿಕೆಶಿ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

DKShivakumar-01

ಬೆಂಗಳೂರು,ಮಾ.6– ಕಲ್ಲಿದ್ದಲು ಖರೀದಿ, ಸೋಲಾರ್ ವಿದ್ಯುತ್ ಉತ್ಪಾದನೆ ಸೇರಿದಂತೆ ಇಂಧನ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಆಧಾರ ಸಹಿತ ಆರೋಪ ಸಾಬೀತುಪಡಿಸಲು ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿಗೆ ರಣವೀಳ್ಯಾ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮಾಜಿ ಸಚಿವರಾದ ಸುರೇಶ್‍ಕುಮಾರ್ ಮತ್ತು   ಸಿ.ಟಿ.ರವಿ ತಮ್ಮ ವಿರುದ್ಧ ಸಾವಿರಾರು ಕೋಟಿ ರೂ.ಗಳ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಯಾವುದೇ ರೀತಿಯ ತನಿಖೆ ನಡೆಸಲು ಸಿದ್ದ ಎಂದು ಸವಾಲು ಹಾಕಿದರು.

ಕಳೆದ ಮೂರುವರೆ ವರ್ಷಗಳಲ್ಲಿ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಲು ಅಧಿಕಾರಿಗಳಿಗೂ ಅವಕಾಶ ನೀಡಿಲ್ಲ. ಮಾಧ್ಯಮ, ವಿಧಾನಸಭೆ ಅಧಿವೇಶನ, ಸಾರ್ವಜನಿಕ ವೇದಿಕೆ ಸೇರಿದಂತೆ ಎಲ್ಲಿಯಾದರೂ, ಯಾವಾಗಲಾದರೂ ಬಹಿರಂಗ ಚರ್ಚೆಗೆ ಸಿದ್ದವಿದ್ದು , ದಾಖಲೆ ಸಹಿತ ಚರ್ಚೆಗೆ ಬರಲಿ ಎಂದು ಶಿವಕುಮಾರ್ ಆಗ್ರಹಿಸಿದರು.  ವಿದೇಶಿ ಮೂಲದ ಕಂಪನಿ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದ್ದು , ಅದರಿಂದ ಕಲ್ಲಿದ್ದಲು ಖರೀದಿಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಕಂಪನಿಯನ್ನು ಬಿಜೆಪಿಗೆ ಬರೆದು ಕೊಡಲು ಸಿದ್ದವಿದ್ದು, ಕಾಗದಪತ್ರಗಳನ್ನು ಸಿದ್ದಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಇಂಧನ ಸಚಿವರಾಗಿದ್ದವರು ಅಥವಾ ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿಯಾಗಿದ್ದವರು ಬಂದರೆ ಬಹಿರಂಗ ಚರ್ಚೆಗೆ ತೂಕ ಬರಲಿದೆ, ನಾನೂ ಕೂಡ 1989ರಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದು , ಮೂರು ಅವಧಿಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆಯೂ ತಮ್ಮ ಮೇಲೆ ಆರೋಪ ಮಾಡಿದಾಗ ಇದೇ ರೀತಿ ಪಕ್ಷಾತೀತವಾಗಿ ಬಹಿರಂಗ ರಣವೀಳ್ಯಯನ್ನು ನೀಡಿದ್ದೆ ಎಂದು ಹೇಳಿದರು.   ಬಿಜೆಪಿ ನಾಯಕರು ಮಾಡಿರುವ ಆರೋಪಕ್ಕೆ ಬದ್ದವಾಗಿರಬೇಕು, 2008ರಿಂದ 2015ರವರೆಗೂ ಕೇಂದ್ರ ಸರ್ಕಾರದ ಎಂಎಸ್‍ಡಿಸಿ ಸಂಸ್ಥೆ ಜೊತೆ ಇಂಧನ ಇಲಾಖೆ ಕಲ್ಲಿದ್ದಲು ಖರೀದಿ ಒಪ್ಪಂದ ಮಾಡಿಕೊಂಡಿದೆಯೇ ಹೊರತು ಯಾವುದೇ ಖಾಸಗಿ ಸಂಸ್ಥೆಯೊಂದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಕಾರ್ಯಕರ್ತರ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಕಲ್ಲಿದ್ದಲು ಖರೀದಿಸಿದ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೂಡ ಇದೇ ಕಂಪನಿ ಕಲ್ಲಿದ್ದಲು ಪೂರೈಸಿತ್ತು. ಅದು ಇಂಡೋನೇಷಿಯಾ ಮೂಲದ ಕಂಪನಿಯೆಂಬುದನ್ನು ಅವರು ಸಾಬೀತುಪಡಿಸಿದರೆ ಆ ಕಂಪನಿಯನ್ನು ಅವರಿಗೇ ಉಡುಗೊರೆಯಾಗಿ ನೀಡುವುದಾಗಿ ಡಿಕೆಶಿ ವ್ಯಂಗ್ಯವಾಡಿದರು.
ಪ್ರಧಾನಿ ನೇತೃತ್ವದಲ್ಲಿ ನಡೆದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಸಂಬಂಧಿಸಿದ ಸಮ್ಮೇಳನದಲ್ಲಿ ನೂರು ಕಂಪನಿಗಳು ಮುಂದೆ ಬಂದಿದ್ದವು. ಆಗ ಕೇಂದ್ರ ಸರ್ಕಾರ ನಮಗೂ ಕೂಡ ಅವಕಾಶ ಮಾಡಿಕೊಟ್ಟಿತ್ತು. ರೈತರ ಮಾಲೀಕತ್ವದಲ್ಲೇ ಜಮೀನು ಉಳಿಸಿಕೊಂಡು 300 ಮೆ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಯೋಜನೆ ಕೈಗೆತ್ತಿಕೊಂಡಾಗ 26 ಸಾವಿರ ರೈತರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಸಲ್ಲಿಕೆ ಸರಿಯಾಗಿದೆ ಎಂದು ಕೇಂದ್ರ ಸರ್ಕಾರವೇ ಪ್ರಮಾಣೀಕರಿಸಿ, ಇತರೆ ರಾಜ್ಯಗಳಿಗೆ ಅನುಸರಿಸುವಂತೆ ಮಾರ್ಗಸೂಚಿಯನ್ನು ನೀಡಿದೆ.   ಅಲ್ಲದೆ ಹಿಂದುಳಿದ ಪ್ರದೇಶವಾದ ಪಾವಗಡದಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡುತ್ತಿರುವುದು ಹೊಸ ಮೈಲಿಗಲ್ಲು ಎಂದ ಅವರು, ಬಿಜೆಪಿ ಅಧಿಕಾರ ಸದ್ಬಳಕೆ ಮಾಡಿಕೊಂಡಾಗಲಿ, ದುರ್ಬಳಕೆ ಮಾಡಿಕೊಂಡಾಗಲೀ ತನಿಖೆ ನಡೆಸಲಿ, ಸಣ್ಣ ತಪ್ಪು ಮಾಡಿಲ್ಲ. ನಮ್ಮ ಪಕ್ಷ ಹಾಗೂ ಸರ್ಕಾರಕ್ಕೆ ಕಿಂಚಿತ್ತೂ ನೋವುಂಟು ಮಾಡುವುದಿಲ್ಲ.   ದ್ವೇಷದ ರಾಜಕಾರಣ ಮಾಡುವುದಿಲ್ಲ. ಜನರು ಕೊಟ್ಟಿರುವ ಪೆನ್ ಇನ್ನು ತೆರೆದೇ ಇದೆ. ಅದನ್ನು ಮುಚ್ಚಿಲ್ಲ ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.

ಪಾವಗಡದಲ್ಲಿ ನಿರ್ಮಿಸುತ್ತಿರುವ ಸೋಲಾರ್ ಪಾರ್ಕ್ ರಾಜ್ಯ ಸರ್ಕಾರದಿಂದಲೇ ಮಾಡುವ ಸಾಮಥ್ರ್ಯವಿದ್ದರೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.   ಪಾವಗಡದಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯವಾಗಿ ತುಂಡು ಗುತ್ತಿಗೆ ವಿಚಾರದಲ್ಲಿ ಗಲಾಟೆಯಾಗಿದೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ನೀಡುವುದಿಲ್ಲ. ಕಾಂಪೌಂಡ್ ಕೂಡ ಪ್ರವೇಶಿಸದಂತೆ ಎಲ್ಲ ರೀತಿಯ ಬಿಗಿಭದ್ರತೆ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin