ಅಂತಿಮ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಶೇ.60, ಮಣಿಪುರದಲ್ಲಿ ಶೇ.86 ರಷ್ಟು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Voting--01

ಲಕ್ನೋ/ಇಂಫಾಲ್, ಮಾ.8-ದೇಶದ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿರುವ ಪಂಚ ರಾಜ್ಯಗಳ ವಿಧಾನಸಭೆಗಳಿಗಾಗಿ ಇಂದು ವ್ಯಾಪಕ ಬಂದೋಬಸ್ತ್ ನಡುವೆ ಅಂತಿಮ ಹಂತದ ಮತದಾನ ನಡೆಯಿತು. ಉತ್ತರಪ್ರದೇಶದಲ್ಲಿ ಶೇ.60, ಮಣಿಪುರದಲ್ಲಿ ಶೇ.86 ರಷ್ಟು ಮತದಾನ ನಡೆದಿದೆ.
ಉತ್ತರ ಪ್ರದೇಶದಲ್ಲಿ ಏಳನೇ ಮತ್ತು ಕೊನೆ ಹಂತ ಹಾಗೂ ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡನೇ ಮತ್ತು ಅಂತಿಮ ಹಂತಕ್ಕೆ ಬಿರುಸಿನ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಮಾರ್ಚ್ 11 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಡೀ ದೇಶದ ಚಿತ್ತ ರಾಜಕೀಯ ಕುರುಕ್ಷೇತ್ರ ಫಲಶೃತಿಯತ್ತ ನೆಟ್ಟಿದೆ.

ಲಕ್ನೋ ವರದಿ:

ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿ ಸೇರಿದಂತೆ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ನಡೆಯಿತು. 535 ಅಭ್ಯರ್ಥಿಗಳು ಕಣದಲ್ಲಿದ್ದು, 1.41 ಕೋಟಿ ಮತದಾರರು ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. 14,458 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.   ಉತ್ತರಪ್ರದೇಶದ ವಿವಿಧೆಡೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಸೆರೆಸಿಕ್ಕಿರುವ ಹಿನ್ನೆಲೆಯಲ್ಲಿ ಚುನಾವಣೆ ಗುರಿಯಾಗಿಟ್ಟುಕೊಂಡು ನಡೆಯಬಹುದಾದ ದಾಳಿಯನ್ನು ನಿಗ್ರಹಿಸಲು ಬಿಗಿ ಭದ್ರತಾ ಏರ್ಪಾಡು ಮಾಡಲಾಗಿದೆ.

ಇಂಫಾಲ್ ವರದಿ:

ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡನೆ ಮತ್ತು ಕೊನೆ ಹಂತದ ಚುನಾವಣೆಗಾಗಿ ಇಂದು ಚುರುಕಿನ ಮತದಾನ ವಾಗಿದೆ. ಬೆಳಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಐದು ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳ ಮತದಾನ ನಡೆದಿದ್ದು, 98 ಹುರಿಯಾಳುಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಿಗೆ ಸೇರಿದೆ. 1,151 ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾದ ಬಗ್ಗೆ ವರದಿಗಳು ಬಂದಿವೆ. ಈಶಾನ್ಯ ರಾಜ್ಯದ ಬಂಡುಕೋರರ ದಾಳಿ ಭೀತಿ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿತ್ತು.

ಮಾನವ ಹಕ್ಕುಗಳ ಕಾರ್ಯಕರ್ತೆ ಶರ್ಮಿಳಾ ಅವರು ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಣ್ ವಿರುದ್ಧ ತೌಬಲ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಈ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಗಿದೆ. ಉತ್ತರ ಪ್ರದೇಶದ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಎದ್ದಿರುವುದರಿಂದ ಬಿಜೆಪಿ ಬಹುಮತ ಗಳಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೊನೆ ಹಂತದ ಚುನಾವಣೆ ಪ್ರಚಾರದ ವೇಳೆ ವಾರಣಾಸಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಬಿಜೆಪಿ ಪರ ಮತದಾರರ ಒಲವಿದೆ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin