ಡಬ್ಬಿಂಗ್ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

vatal-nagraj

ಬೆಂಗಳೂರು,ಮಾ.8- ಡಬ್ಬಿಂಗ್ ವಿರೋಧಿಸಿ ಕನ್ನಡ ಒಕ್ಕೂಟ ವತಿಯಿಂದ ನಾಳೆ ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹಿರಿ-ಕಿರುತೆರೆ ಕಲಾವಿದರು, ಕಾರ್ಮಿಕರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಎಲ್ಲರೂ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸುವ ಮೂಲಕ ಕನ್ನಡ ಚಿತ್ರೋದ್ಯಮ ಉಳಿಸಲು ಮುಂದಾಗಬೇಕೆಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.  ಡಬ್ಬಿಂಗ್ ಸಂಸ್ಕøತಿ ಕನ್ನಡ ಚಿತ್ರೋದ್ಯಮಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳು ರಾಜ್ಯದಲ್ಲಿ ತೆರೆ ಕಾಣಬಾರದು. ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡ ಚಿತ್ರೋದ್ಯಮ ನೆಲ ಕಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಡಬ್ಬಿಂಗ್ ವಿರೋಧಿಸಿ ಕಳೆದ 8 ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಈಗ ಡಬ್ಬಿಂಗ್ ಚಿತ್ರಗಳು ರಾಜ್ಯಕ್ಕೆ ಕಾಲಿಟ್ಟರೆ ಈ ಹೋರಾಟ ಅರ್ಥ ಕಳೆದುಕೊಳ್ಳುತ್ತದೆ. ಈಗಾಗಲೇ ತಮಿಳು, ತೆಲುಗು, ಮಲೆಯಾಳಿ ಮುಂತಾದ ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರೋದ್ಯಮ ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಡಬ್ಬಿಂಗ್ ಚಿತ್ರಗಳು ಬಂದರೆ ನಮ್ಮ ಚಿತ್ರೋದ್ಯಮ ಅಧೋಗತಿಗಿಳಿಯುತ್ತದೆ. ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂದು ಹೇಳಿದರು.   ಡಬ್ಬಿಂಗ್ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಎಲ್ಲಾ ಚಿತ್ರಮಂದಿರಗಳ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ಪರಭಾಷಾ ಚಿತ್ರಗಳನ್ನು ಬಹಿಷ್ಕರಿಸಬೇಕು. ಕನ್ನಡ ಚಿತ್ರೋದ್ಯಮ ಬೆಳೆಯಬೇಕು, ಉಳಿಯಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ.

ನಾಳೆ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಚಿತ್ರೋದ್ಯಮದ ಎಲ್ಲರೂ ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ವಾಟಾಳ್ ಹೇಳಿದರು.   ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಕನ್ನಡ ಉಳಿಸಿ ಎಂಬ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಡಳಿತದಲ್ಲಿ ನೇಮಕಾತಿಯಲ್ಲಿ, ಬ್ಯಾಂಕ್‍ಗಳಲ್ಲಿ , ಕೇಂದ್ರ ಕಚೇರಿಗಳಲ್ಲಿ ಕನ್ನಡ ಜಾರಿಗೊಳಿಸಬೇಕು ಎಂದು ಹೋರಾಟ ಮಾಡಲಾಗುತ್ತಿದೆ. ಈಗ ಡಬ್ಬಿಂಗ್ ವಿರೋಧಿಸಿ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin