ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಜೆ.ಡಿ.ನಾಯ್ಕ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Kumara-Bangarappa--BJP

ಬೆಂಗಳೂರು, ಮಾ.9– ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರ ಹಾಗೂ ಮಾಜಿ ಸಚಿವ ಕುಮಾರ್‍ಬಂಗಾರಪ್ಪ ಮತ್ತು ಅವರ ಬೆಂಬಲಿಗರು ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಕುಮಾರ್ ಬಂಗಾರಪ್ಪ ಅವರ ಜತೆ ಮಾಜಿ ಶಾಸಕ ಜೆ.ಡಿ.ನಾಯ್ಕ್ ಕೂಡ ಕಮಲವನ್ನು ಮುಡಿಗೇರಿಸಿಕೊಂಡರು. ಈ ಇಬ್ಬರ ಮುಖಂಡರ ಜತೆ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾಕರಂದ್ಲಾಜೆ, ಶಾಸಕರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಮತ್ತಿತರರು ಈ ಇಬ್ಬರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಕುಮಾರ್ ಬಂಗಾರಪ್ಪ ಮತ್ತು ಜೆ.ಡಿ.ನಾಯ್ಕ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ನಿನ್ನೆಯಷ್ಟೇ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ರತನ್‍ಸಿಂಗ್ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ ಈ ಇಬ್ಬರು ಬಿಜೆಪಿಗೆ ಆಗಮಿಸಿರುವುದು ಕಮಲ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.

ಎರಡು ದಶಕಗಳ ಕಾಲ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪನವರ ಗರಡಿಯಲ್ಲಿ ಪಳಗಿದವರು. ಬಂಗಾರಪ್ಪ ಪ್ರತಿನಿಧಿಸುತ್ತಿದ್ದ ಸೊರಬ ಕ್ಷೇತ್ರವನ್ನೇ ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಇಲ್ಲಿಂದ ಮೂರು ಬಾರಿಗೆ ಗೆದ್ದಿದ್ದರು.  ಇತ್ತೀಚೆಗಷ್ಟೇ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿರುವ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕುಮಾರ್ ಸೇವೆ ಸಲ್ಲಿಸಿದ್ದರು. ಅಂದು ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿಕೊಂಡ ಹಿನ್ನೆಲೆಯಲ್ಲಿ ಕೆರೆಗಳ ಹೂಳೆತ್ತಿ ನೀರು ತುಂಬಿಸುವ ಕಾಯಕಕ್ಕೆ ಚಾಲನೆ ಕೊಟ್ಟು ರಾಜ್ಯದೆಲ್ಲೆಡೆ ಕುಮಾರ್ ಬಂಗಾರಪ್ಪ ಹೆಸರುವಾಸಿಯಾಗಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸೊರಬ ಜನತೆ ಮೂರು ಬಾರಿ ಅವರುನ್ನು ಪರಾಭವಗೊಳಿಸಿದ್ದು ಹಾಗೂ ಪಕ್ಷದಲ್ಲಿ ಅವರನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‍ಗೆ ಸೋಡಾ ಚೀಟಿ ನೀಡಿದ್ದಾರೆ. ಇನ್ನೂ ಭಟ್ಕಳದ ಮಾಜಿ ಶಾಸಕ ಜಿ.ಡಿ.ನಾಯ್ಕ್ ಕೂಡ ಮಾತೃಪಕ್ಷಕ್ಕೆ ಹಿಂದಿರುಗಿದ್ದಾರೆ.  2018ರ ವಿಧಾನಸಭೆ ಚುನಾವಣೆಯಲ್ಲಿ ಈ ಇಬ್ಬರು ಕ್ರಮವಾಗಿ ಸೊರಬ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಸೊರಬ ಹೈವೋಲ್ಟೇಜ್ ಕ್ಷೇತ್ರವಾಗಿರುವುದರಿಂದ ಮಾಜಿ ಶಾಸಕ ಹರತಾಳ ಹಾಲಪ್ಪ ಕೂಡಲ ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅಂತಿಮವಾಗಿ ಯಡಿಯೂರಪ್ಪ ಕೃಪೆ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಟಿಕೆಟ್ ಸಿಗುವ ಸಂಭವವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin