ಕೇಂದ್ರದ ಕಡೆ ಕೈತೋರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರವೇ ಸಾಲಮನ್ನಾ ಮಾಡಲಿ : ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಬೆಂಗಳೂರು,ಮಾ.9-ಪತ್ರ ಬರೆದು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು ಸದ್ಯ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲವನ್ನು ಕೂಡಲೇ ರಾಜ್ಯ ಸರ್ಕಾರ ಮನ್ನಾ ಮಾಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೇ.55ರಷ್ಟು ಸಾಲಮನ್ನಾವನ್ನು ಕೇಂದ್ರ ಸರ್ಕಾರ ಭರಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆದು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ. ಸಾಲ ಮನ್ನಾ ಘೋಷಣೆ ಮಾಡಿ ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕೊಂಡೊಯ್ಯಬೇಕು ಎಂದರು.   ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಸಲುವಾಗಿ 3600 ಕೋಟಿ ಭರಿಸಿದ್ದೆವು. ಈ ವೇಳೆ ಪ್ರತಿ ರೈತರ 25 ಸಾವಿರ ಸಾಲವನ್ನು ಮನ್ನಾ ಮಾಡಿದ್ದೆವು ಎಂದು ಹೇಳಿದರು.

ಕತ್ತಲೆ ಬಿಂಬ:

ರಾಜ್ಯ ಸರ್ಕಾರದ ಸಾಧನೆಯನ್ನು ಬಿಂಬಿಸುವ ಮಾಹಿತಿ ಕೋಶ ತಾಣವಾದ ಪ್ರತಿಬಿಂಬ ಕತ್ತಲೆ ಬಿಂಬವಾಗಿದೆ. ಪ್ರತಿಬಿಂಬದಲ್ಲಿ ಸರಿಯಾದ ಮಾಹಿತಿ ಇಲ್ಲ. ಇದು ಸರ್ಕಾರದ ಕಪ್ಪು ಬಿಂಬವಾಗಿದೆ ಎಂದು ಅವರು ಟೀಕಿಸಿದರು.   ರಾಜ್ಯದಲ್ಲಿ ಹಿಂದೆಂದು ಕಾಣದಂತಹ ಬರಪರಿಸ್ಥಿತಿ ಏರ್ಪಟ್ಟಿದ್ದು , ಕುಡಿಯುವ ನೀರು, ಮೇವು ಬ್ಯಾಂಕ್, ಗೋಶಾಲೆಗಳು ರಾಜ್ಯದಲ್ಲಿಲ್ಲ. ಸರ್ಕಾರ ಹೇಳಿದ ಪ್ರಮಾಣದಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸುತ್ತಿಲ್ಲ. ಪದೇ ಪದೇ ನೀರಿನ ಸಮಸ್ಯೆ ಉಂಟಾಗುವ ಕಡೆಗಳಲ್ಲಿ ಕುಡಿಯುವ ನೀರು ಬಗೆಹರಿಸುವ ದೀರ್ಘಾವಧಿ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿಲ್ಲ ಎಂದು ಆರೋಪಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಕೋಟಿ ಬಿಡುಗಡೆ ಮಾಡಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ತುರ್ತಾಗಿ ಮಾಡಬೇಕಿದೆ ಎಂದ ಅವರು, ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದ್ದ ಯಶಸ್ವಿನಿ ಯೋಜನೆಯಲ್ಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ಗೊಂದಲ ಉಂಟು ಮಾಡುತ್ತಿದ್ದಾರೆ. ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಪಡಿತರ ಚೀಟಿ ನೀಡಿಕೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.   ಹಣಕಾಸು ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯಲ್ಲಿನ ಫೆಬ್ರವರಿ ಅಂತ್ಯದವರೆಗೆ ಸರ್ಕಾರ ಮಾಡಿರುವ ಸಾಧನೆಯ ಮಾಹಿತಿಯನ್ನು ಕೇಳಿದರೂ ಅಧಿಕಾರಿಗಳು ಕೊಡುತ್ತಿಲ್ಲ. ಪತ್ರ ಬರೆಯುವುದಲ್ಲದೆ ಕೆಲವು ಇಲಾಖೆಗೆ ಖುದ್ದಾಗಿ ತೆರಳಿ ಮಾಹಿತಿ ಕೇಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಹಿಂದೆ ಮಾಹಿತಿ ಮುಚ್ಚಿ ಹಾಕುವ ಉದ್ದೇಶವಿದೆ. ಜೊತೆಗೆ ಸರ್ಕಾರದ ಬೇಜಾವಬ್ದಾರಿತನ ಎಂದು ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin