ಬೆಂಗಳೂರಿನ ೪ ದಿಕ್ಕಿನಲ್ಲಿ ಸ್ಟೀಲ್ ಬ್ರಿಡ್ಜ್ ಬದಲು ಎಲಿವೇಟೆಡ್ ರಸ್ತೆ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Steel

ಬೆಂಗಳೂರು, ಮಾ.9- ಸ್ಟ್ರೀಲ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ವಾಪಸು ಪಡೆದ ನಂತರ ಇದೀಗ ನಗರದ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಎಲಿವೇಟೆಡ್ (ಮೇಲೆತ್ತರಿಸಿದ) ರಸ್ತೆ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ.  ಬಿಬಿಎಂಪಿ ಗಾಜಿನ ಮನೆಯಲ್ಲಿ ವಾರ್ಡ್‍ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ 465 ಕೋಟಿ ರೂ. ವೆಚ್ಚದ 2069 ಕಾಮಗಾರಿಗಳ ಪೈಕಿ 728 ಗುತ್ತಿಗೆದಾರರಿಗೆ ಏಕಗವಾಕ್ಷಿ ಯೋಜನೆಯಡಿ ಕಾರ್ಯಾದೇಶ ಪತ್ರ ವಿತರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸರ್ಕಾರದ ಈ ತೀರ್ಮಾನವನ್ನು ಪ್ರಕಟಿಸಿದರು. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಭಾಗಗಳನ್ನು ಸಂಪಕಿ ್ಸುವ ಈ ಎಲೆವೇಟೆಡ್ ರಸ್ತೆಗೆ ಅಂದಾಜು 15ರಿಂದ 20 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಸರ್ಕಾರ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದೆ ಎಂದು ಹೇಳಿದರು.

ಇದರ ಬಗ್ಗೆ ಯಾವುದೇ ಅನುಮಾನವಿದ್ದರೆ ಸಂಘ- ಸಂಸ್ಥೆಗಳು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು. ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 7300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಇವು ಶೀಘ್ರವೇ ಪೂರ್ಣಗೊಳ್ಳಲಿವೆ ಎಂದು ಹೇಳಿದರು.  ಕಾಮಗಾರಿಗಳ ಗುತ್ತಿಗೆ ಕರೆಯುವಾಗ ಕೆಲವರು ಮಾಡುವ ತಪ್ಪಿನಿಂದ ಸಮಸ್ಯೆಗಳು ಉಂಟಾಗುತ್ತಿವೆ. ಇದನ್ನು ನಿವಾರಿಸಲು ನಾವು ಗಮನ ಹರಿಸುತ್ತೇವೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಂತು ಅಡಚಣೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದೇವೆ. ಬೃಹತ್ ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಿದ್ದೇವೆ. ಬಿಬಿಎಂಪಿಗೆ ಕೂಡ 700 ಕೋಟಿ ಕೊಟ್ಟಿದ್ದೇವೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರುವ ಆದಾಯದಲ್ಲಿ ಎಷ್ಟು ಹಣ ನೀಡಲು ಸಾಧ್ಯವೋ ಅಷ್ಟನ್ನು ನಗರದ ಅಭಿವೃದ್ಧಿಗೆ ನೀಡುತ್ತಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಾರಿ 2060 ಕೋಟಿ ತೆರಿಗೆ ಸಂಗ್ರಹವಾಗಿದೆ. ಆದರೆ, ಆಸ್ತಿ ತೆರಿಗೆ ಜಾಲದಿಂದ ಕೈಬಿಟ್ಟು ಹೋಗಿರುವ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ತಂದಿಲ್ಲ. ಇದು ತೆರಿಗೆ ಸಂಗ್ರಹ ಕುಂಠಿತಕ್ಕೆ ಕಾರಣವಾಗಿದೆ. ಕೈಬಿಟ್ಟು ಹೋಗಿರುವ ಆಸ್ತಿಯನ್ನು ತೆರಿಗೆ ಜಾಲಕ್ಕೆ ತರುವುದರಲ್ಲಿ ವಿಳಂಬವಾಗಲು ಅಕಾರಿಗಳ ವೈಫಲ್ಯ ಕಾರಣ. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ 15 ದಿನ ತರಬೇತಿ ನೀಡಿ ತೆರಿಗೆ ಜಾಲಕ್ಕೆ ತೆರಿಗೆ ವಂಚಿತ ಆಸ್ತಿಯನ್ನು ಸೇರಿಸಲು ನಿಯೋಜಿಸುತ್ತೇವೆ ಎಂದು ತಿಳಿಸಿದರು. ಆಸ್ತಿ ತೆರಿಗೆ ವಂಚಿತರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಅಕಾರಿಗಳು ಸಮರ್ಪಕವಾಗಿ ಕ್ರಮ ಕೈಗೊಳ್ಳದ ಕಾರಣ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ಹೊರ ಗುತ್ತಿಗೆಗೆ ನೀಡಲು ತೀರ್ಮಾಣಿಸಿದ್ದೇವೆ ಎಂದು ಹೇಳಿದರು.
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಇಂದು ಏಕಕಾಲಕ್ಕೆ 728 ಕಾಮಗಾರಿಗಳಿಗೆ ಆದೇಶ ಪತ್ರ ನೀಡಿದ್ದೇವೆ. ಆ ಎಲ್ಲಾ ಗುತ್ತಿಗೆದಾರರು ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸುವಂತೆ ಕಿವಿಮಾತು ಹೇಳಿದರು.

ಒಂದೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಕಾಮಗಾರಿಗಳನ್ನು ಮುಗಿಸಿ ಬಾಕಿ ಇರುವ ಬಿಲ್ ಬಿಡುಗಡೆ ಮಾಡಿಸಲು ಸಚಿವ ಜಾರ್ಜ್ ಅವರು ಮುಖ್ಯಮಂತ್ರಿಯವರ ಜತೆ ಮಾತನಾಡಲಿದ್ದಾರೆ ಎಂದು ಭರವಸೆ ನೀಡಿದರು.  ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಏಕಗವಾಕ್ಷಿ ಯೋಜನೆ ಒಂದು ಉತ್ತಮ ನಿರ್ಧಾರ. ಆದರೆ, ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆಯಾಗದ ಕಾರಣ ಅವರು ಟೆಂಡರ್‍ನಲ್ಲಿ ಭಾಗವಹಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಸಚಿವರು ಸರ್ಕಾರದಿಂದ ಒಂದು ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಬಿಲ್ ಚುಕ್ತ ಗೊಳಿಸುವಂತೆ ಮನವಿ ಮಾಡಿದರು.

ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಭದ್ರೇಗೌಡ ಮಾತನಾಡಿ, ಗುತ್ತಿಗೆದಾರರ ಬಿಲ್ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಟೆಂಡರ್‍ನಲ್ಲಿ ಭಾಗವಹಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಬಜೆಟ್‍ನಲ್ಲಿ ವಾರ್ಡ್ ಮಟ್ಟದ ಕಾಮಗಾರಿಗೆ ಸಾಮಾಜಿಕ ನ್ಯಾಯ ಸಮಿತಿಗೆ ನಿಗದಿಪಡಿಸಿರುವಂತೆ ಮುಂಗಡ ಹಣ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.  2017ನೆ ಸಾಲಿನಲ್ಲಿ 465 ಕೋಟಿ ರೂ. ವೆಚ್ಚದ 2069 ಕಾಮಗಾರಿಗಳಿಗೆ ನಾವು ಏಕಗವಾಕ್ಷಿ ಯೋಜನೆಯಡಿ ಟೆಂಡರ್ ಕರೆದಿದ್ದೆವು. ಕೇವಲ 1526 ಮಂದಿ ಗುತ್ತಿಗೆದಾರರು ಭಾಗವಹಿಸಿದ್ದಾರೆ. ಇಂದು ನಾವು 728 ಕಾಮಗಾರಿಗಳಿಗೆ ಮಾತ್ರ ಕಾರ್ಯಾದೇಶ ಪತ್ರ ನೀಡಿದ್ದೇವೆ. ಇಂತಹ ಸನ್ನಿವೇಶ ಹೋಗಬೇಕಾದರೆ ಈ ಬಾರಿಯ ಬಜೆಟ್‍ನಲ್ಲಿ ವಾರ್ಡ್ ಮಟ್ಟದ ಕಾಮಗಾರಿಗೆ ವಿಶೇಷ ಅನುದಾನ ಕಾಯ್ದಿರಿಸಬೇಕೆಂದು ಮನವಿ ಮಾಡಿದರು.  ಉಪಮೇಯರ್ ಆನಂದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ರಿಜ್ವಾನ್, ಜೆಡಿಎಸ್ ಗುಂಪಿನ ನಾಯಕಿ ರಮಿಳಾ ಉಮಾಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ಗುಣಶೇಖರ್, ನೇತ್ರಾ, ಗಾಯತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin