ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ : ಗರಿಗೆದರಿದ ರಾಜಕೀಯ ಚಟುವಟಿಕೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Nanjanaguru---Gundlupete-el

ಬೆಂಗಳೂರು, ಮಾ.10- 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.   ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಗೆಲ್ಲಲು ತಮ್ಮದೆ ಆದ ಕಾರ್ಯತಂತ್ರ ಹೆಣೆದಿವೆ.   ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ನಾಯಕತ್ವಕ್ಕೆ ಈ ಫಲಿತಾಂಶ ಓರೆಗಲ್ಲಾಗುವ ಸಂಭವವಿದೆ. ಹೀಗಾಗಿ ಎರಡು ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆಯಲು ಉಭಯ ಮುಖಂಡರು ತಮ್ಮದೇ ಆದ ರಣತಂತ್ರವನ್ನು ರೂಪಿಸುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್‍ನಿಂದ ನಂಜನಗೂಡಿಗೆ ಕಳಲೆ ಕೇಶವಮೂರ್ತಿ ಗುಂಡ್ಲುಪೇಟೆಗೆ ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹಾದೇವಪ್ರಸಾದ್ ಕಣಕ್ಕಿಳಿಯಲಿದ್ದಾರೆ.

ಇನ್ನು ಬಿಜೆಪಿಯಿಂದ ಕಾಂಗ್ರೆಸ್ ತೊರೆದಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ನಂಜನಗೂಡಿನಿಂದ ಮತ್ತು ಗುಂಡ್ಲುಪೇಟೆಯಿಂದ ನಿರಂಜನ್ ಅಭ್ಯರ್ಥಿಯಾಗಲಿದ್ದಾರೆ.   ಕಾಂಗ್ರೆಸ್ ಮತ್ತು ಬಿಜೆಪಿಗೆ ಟಾಂಗ್ ಕೊಡಲು ಮುಂದಾಗಿರುವ ಜೆಡಿಎಸ್ ಕೂಡ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎರಡೂ ಕ್ಷೇತ್ರಗಳಲ್ಲೂ ಕಣಕ್ಕಿಳಿಸುವುದಾಗಿ ಹೇಳುವ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಸಿಎಂ:

ತಮ್ಮ ನಾಯಕತ್ವದಲ್ಲೇ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹವಣಿಕೆಯಲ್ಲಿರುವ ಸಿದ್ದರಾಮಯ್ಯ ಇಂದು ಮತ್ತು ನಾಳೆ ಗುಂಡ್ಲುಪೇಟೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಮತದಾರರನ್ನು ಮನವೊಲಿಕೆ ಮಾಡಲಿದ್ದಾರೆ. ಶತಾಯ-ಗತಾಯ ಈ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.   ವಿದೇಶಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾರ್ಯಕರ್ತರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. 13ರಂದು ರಾಜ್ಯಕ್ಕೆ ಆಗಮಿಸಲಿರುವ ಪರಮೇಶ್ವರ್ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಚಾರಕ್ಕೆ ತೆರಳುವರು.

ಸಚಿವರ ನೇಮಕ:

 

ಎರಡೂ ಕ್ಷೇತ್ರಗಳನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಇಬ್ಬರು ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲು ಮುಂದಾಗಿದ್ದಾರೆ.   ಆಯಾ ಜಾತಿಗೆ ಇಬ್ಬಿಬ್ಬರು ಸಚಿವರನ್ನು ನೇಮಕ ಮಾಡುವ ಮೂಲಕ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲೇ ಸಚಿವರು ವಾಸ್ತವ್ಯ ಹೂಡಬೇಕೆಂದು ಸೂಚಿಸಲಾಗಿದೆ.  ಈ ಮೂಲಕ ತಮ್ಮ ನಾಯಕತ್ವದ ವಿರುದ್ಧ ಪದೇ ಪದೇ ಸೊಲ್ಲೆತ್ತುತ್ತಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಉಪಚುನಾವಣೆಯಲ್ಲಿ ಬಗ್ಗು ಬಡಿಯಬೇಕೆಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

ಬಿಎಸ್‍ವೈಗೂ ಅಗ್ನಿ ಪರೀಕ್ಷೆ:

ಬಿ.ಎಸ್.ಯಡಿಯೂರಪ್ಪ ಪಕ್ಷದ ಸಾರಥ್ಯ ವಹಿಸಿದ ಮೇಲೆ ನಡೆಯುತ್ತಿರುವ ಮಿನಿಸಮರ ಇದಾಗಿರುವುದರಿಂದ ಎರಡೂ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಈಗಾಗಲೇ ನಂಜನಗೂಡಿಗೆ ಮಾಜಿ ಸಚಿವರಾದ ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಗುಂಡ್ಲುಪೇಟೆಗೆ ಅರವಿಂದ ಲಿಂಬಾವಳಿ, ಸಿ.ಟಿ.ರವಿ ಅವರುಗಳನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.   ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ವೀರಶೈವ ಮತ್ತು ದಲಿತ ಮತಗಳನ್ನು ಸೆಳೆಯಲು ಬಿಎಸ್‍ವೈ ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದಾರೆ.  ಶತಾಯ-ಗತಾಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಿ ಸಿದ್ದರಾಮಯ್ಯನವರಿಗೆ ಸೋಲಿನ ರುಚಿ ಉಣಿಸಬೇಕೆಂಬುದು ಅವರ ಲೆಕ್ಕಾಚಾರವಾಗಿದೆ. ಈವರೆಗೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿದ್ದ ಜೆಡಿಎಸ್ ಕೂಡ ಎರಡು ರಾಷ್ಟ್ರೀಯ ಪಕ್ಷಗಳಿಗೆ ತೊಡೆ ತಟ್ಟಲು ಅಖಾಡಕ್ಕಿಳಿದಿದೆ. ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಉಪಚುನಾವಣೆಯನ್ನು ತಾವು ಕೂಡ ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬ ಸಂದೇಶವನ್ನು ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದ್ದಾರೆ.  ಏ.9ರಂದು ಮತದಾನ ನಡೆಯಲಿದ್ದು, 13ರಂದು ಮತಗಳ ಎಣಿಕೆ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin