ಸಾಧನೆ ಮಾಡುವವರಿಗೆ ನೆಪ ಎಂದೂ ಅಡ್ಡಿ ಬರುವುದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

16

ಬಾಗಲಕೋಟೆ,ಮಾ.10 – ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರನ್ನು ಸ್ಮರಿಸಲೇಬೇಕು. ಸಾಧನೆ ಮಾಡುವವರಿಗೆ ನೆಪ ಎಂದೂ ಅಡ್ಡಿ ಬರುವುದಿಲ್ಲ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಅಭಿಪ್ರಾಯ ಪಟ್ಟರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹು ಹಿಂದಿನಿಂದಲೂ ಸಾಧನೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳ ಮಧ್ಯದಲ್ಲಿಯೇ ಕೆಲವು ಮಹಿಳೆಯರು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಮ್ಮ ಕನ್ನಡ ನಾಡಿನಲ್ಲಿ 12ನೇ ಶತಮಾನದ ಅಕ್ಕಮಹಾದೇವಿ, ವಿಶ್ವ ಮಹಿಳಾ ದಿನಾಚರಣೆಯ ಪರಿಕಲ್ಪನೆ ನೀಡಿದ ಜರ್ಮನಿಯ ಕ್ಲಾರಾ ಜೆಟ್ಕಿನ್‍ಳನ್ನು ಸ್ಮರಿಸಲೇಬೇಕು. ಹೆಣ್ಣುಮಕ್ಕಳ ಆರ್ಥಿಕ ಸ್ವಾತಂತ್ರ್ಯವನ್ನು ಬೆಂಬಲಿಸಿ ಇಡೀ ವಿಶ್ವದಲ್ಲಿಯೇ ಹೆಣ್ಣುಮಕ್ಕಳು ಜಾಗೃತರಾಗುವಂತಾಯಿತು ಎಂದು ಅವರು ತಿಳಿಸಿದರು.  ಈ ವರ್ಷದ ಮಹಿಳಾ ದಿನಾಚರಣೆ ದಿಟ್ಟತನದಿಂದ ಮುನ್ನುಗ್ಗಿ ಎಂಬ ಉದ್ಘೋಷಣೆಯ ಸಾರ್ಥಕತೆಯನ್ನು ಕಾಣಬೇಕಾದರೆ ನಾವು ನಮ್ಮ ಹೆಣ್ಣುಮಕ್ಕಳಲ್ಲಿ ಧೈರ್ಯವಂತಿಕೆಯನ್ನು ಬೆಳೆಸುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ ಕಲಿಯುವುದು ಹೆಣ್ಣುಮಕ್ಕಳಿಗೆ ಅನಿವಾರ್ಯವಾಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ಮಹತ್ವವಾಗಿದ್ದು, ಬಾಲ್ಯವಿವಾಹ, ಮೂಢನಂಬಿಕೆಗಳನ್ನು ತಡೆಗಟ್ಟಬೇಕು. ದುಡಿಯುವ ಮಹಿಳೆಯರು ಮಕ್ಕಳ ಕಡೆ ಅಲಕ್ಷ್ಯ ಮಾಡಬಾರದು. ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ಕಿವಿಮಾತುಗಳನ್ನು ಹೇಳಿದರು.

ಕುಲಪತಿ ಡಾ. ಡಿ.ಎಲ್. ಮಹೇಶ್ವರ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಅವಕಾಶಗಳಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಮ್ಮ ವಿವಿಯ ಮಹಿಳಾ ಬೋಧಕರು ತಮ್ಮ ಸ್ವಪ್ರಯತ್ನದಿಂದ ತಮ್ಮ ಕಾರ್ಯ ಯೋಜನೆಗೆ ಅನುದಾನ ತಂದಿದ್ದಾರೆ. ಹೆಣ್ಣು ಮಕ್ಕಳು ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸಿ, ಹೆಣ್ಣುಮಕ್ಕಳ ದಿಟ್ಟತನ ವಿಶ್ವವಿದ್ಯಾಲಯದ ಪ್ರಗತಿಗೆ ನಾಂದಿಯಾಗಬೇಕು ಎಂದು ಅವರು ಹೇಳಿದರು. ಹೆಣ್ಣುಮಕ್ಕಳು ಮಾಡುವ ಕೆಲಸ ವ್ಯಕ್ತಿಗತ, ಗುಂಪಾಗಿ, ಸಾಮಾಜಿಕವಾಗಿ ಮಾಡುವಾಗ ಕಾಳಜಿ ಹಾಗೂ ವಿಶ್ವಾಸ ಪೂರ್ವಕವಾಗಿ ಮಾಡಿ, ನೀವಿರುವ ವಾತಾವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ವಿಶ್ವದ ಸಂಪೂರ್ಣ ಶಕ್ತಿ ಸಾಮಥ್ರ್ಯವಾಗಿರುವ ಸ್ತ್ರೀಯು ಸಂಸಾರಕ್ಕೆ ಸಂಸ್ಕಾರವನ್ನು ಕೊಡುವವಳು. ಜನನಿಯಿಂದ ಪಾಠ ಕಲಿತವರು ಧನ್ಯರು. ಮಹಿಳೆಯರಲ್ಲಿ ಕರ್ತೃತ್ವ ಶಕ್ತಿ ನಿರಂತರವಾಗಿರುತ್ತದೆ. ಹೆಣ್ಣು ಮಕ್ಕಳ ಸ್ಫೂರ್ತಿ ಇನ್ನೊಬ್ಬರಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಯುವ ಪ್ರತಿಭೆ ಕನ್ನಡ ಝೀ ವಾಹಿನಿಯ ಸರಿಗಮಪ, ಹಿಂದಿ ಸೋನಿ ದೂರದರ್ಶನದಲ್ಲಿ ಭಾಗವಹಿಸಿದ ಹಾಗೂ ಇತ್ತೀಚೆಗೆ ಆ್ಯಂಡ್ ದೂರದರ್ಶನದಲ್ಲಿ ವೈಸ್ ಆಫ್ ಇಂಡಿಯಾದಲ್ಲಿ ಆಯ್ಕೆಯಾದ ಆದಿತಿ ಖಂಡೇಗಾಲ್‍ಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತೋವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಎಲ್ಲಾ ಮಹಿಳಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin