ಪಾರ್ಟಿಯಲ್ಲಿ ಕುಡಿದ ಮತ್ತಲ್ಲಿ ಶುರುವಾದ ಜಗಳ ಸಹೋದರನ ಕೊಲೆಯಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Murder--00

ಬೆಂಗಳೂರು, ಮಾ.12– ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ಸೋದರರಿಬ್ಬರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ನೇಪಾಳದವನಾದ ವಿನೋದ್(32) ಕೊಲೆಯಾದವ. ಈತನ ಚಿಕ್ಕಪ್ಪನ ಮಗ ಹೇಮರಾಜ್ ಅಲಿಯಾಸ್ ರಾಜ್‍ಗಿರಿ ಕೊಲೆ ಆರೋಪಿ. ಹೇಮರಾಜ್ ನಗರಕ್ಕೆ ಬಂದು ಕಣ್ಣೂರಿನಲ್ಲಿ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಿದ್ದಾನೆ. ದೊಡ್ಡಪ್ಪನ ಮಗ ವಿನೋದ್ ಸೇರಿದಂತೆ ಮೂವರನ್ನು ನೇಪಾಳದಿಂದ ಕರೆಸಿಕೊಂಡಿದ್ದು, ಅವರು ಸಹ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಾರೆ.

ನಾಲ್ವರು ಕಣ್ಣೂರಿನಲ್ಲಿ ರೂಂ ಮಾಡಿಕೊಂಡು ಒಟ್ಟಿಗೆ ವಾಸವಿದ್ದಾರೆ. ರಾತ್ರಿ ನಾಲ್ವರು ಸೇರಿ ಪಾರ್ಟಿ ಮಾಡಿದ್ದು, ಕುಡಿದ ಮತ್ತಿನಲ್ಲಿ ವಿನೋದ್ ಗಲಾಟೆ ಮಾಡಲಾರಂಭಿಸಿದ್ದಾನೆ. ಆಗ ಹೇಮರಾಜ್ ಮನೆ ಮಾಲೀಕರು ಬಂದರೆ ಬೈಯ್ಯುತ್ತಾರೆ ಸುಮ್ಮನಿರು ಎಂದರೂ ಗಲಾಟೆ ಮುಂದುವರೆಸಿದ ವಿನೋದ್ ತನ್ನ ಸೋದರನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.  ಇದರಿಂದ ಕುಪಿತಗೊಂಡ ಹೇಮರಾಜ್ ಅಡುಗೆ ಕೋಣೆಯಿಂದ ಚಾಕುತಂದು ವಿನೋದ್‍ನ ಪಕ್ಕೆಗೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿನೋದ್‍ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ವಿಷಯ ತಿಳಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹೇಮರಾಜ್‍ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಶವವನ್ನು ಮರಣೊತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತನ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin