ವಿದ್ಯಾವಾರಿಧಿ ಶಾಲೆಗೆ ಉಗ್ರಪ್ಪ ಭೇಟಿ : ಸಿಬ್ಬಂದಿಗಳಿಗೆ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Vidya-varadhi

ತುಮಕೂರು, ಮಾ.12- ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾವಾರಿಧಿ ಶಾಲೆಗೆ ರಾತ್ರಿ ಭೇಟಿ ನೀಡಿ ಮಕ್ಕಳ ಸಾವಿನ ಬಗ್ಗೆ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಉಗ್ರಪ್ಪ ಹಾಸ್ಟೆಲ್ ಅವ್ಯವಸ್ಥೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿರುವ ಮಕ್ಕಳ ಬೆಲೆ ಕಟ್ಟಲು ಸಾಧ್ಯವಿಲ್ಲ. ಜತೆಗೆ ಕುಟುಂಬಕ್ಕಾಗಿರುವ ನಷ್ಟ ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕಿದ್ದು, ಶಾಲೆ ಆಡಳಿತ ಮಂಡಳಿಯಿಂದ ಕೊಡಿಸಬೇಕು. ಸಾಧ್ಯವಾದರೆ ಸರ್ಕಾರವೇ ಮೊದಲು ಕೊಟ್ಟು ನಂತರ ಶಾಲೆಯಿಂದ ರಿಕವರಿ ಮಾಡಬೇಕು ಎಂದು ಹೇಳಿದರು.

ಆಡಳಿತ ಮಂಡಳಿ ಅನಧಿಕೃತವಾಗಿ ಹಾಸ್ಟೆಲ್ ನಡೆಸುತ್ತಿರುವುದು ಮೊದಲ ಅಕ್ಷಮ್ಯ ಅಪರಾಧವಾದರೆ ಮಧ್ಯಾಹ್ನನ ಊಟವನ್ನು ರಾತ್ರಿ ತಂಗಳಾದ ಮೇಲೆ ಕೊಡುವುದು ಮತ್ತೊಂದು ಅಪರಾಧವಾಗಿದೆ. ಅಡಿಗೆ ಮನೆ, ಡೈನಿಂಗ್ ಹಾಲ್, ಹಾಸ್ಟೆಲ್ ಇಲ್ಲದೆ ಶಾಲಾ ಕೊಠಡಿಗಳನ್ನೇ ಹಾಸ್ಟೆಲ್, ಡೈನಿಂಗ್ ಹಾಲ್‍ಗೆ ಬಳಕೆ ಮಾಡುತ್ತಿರುವುದು ಇನ್ನೊಂದು ಅಪರಾಧವಾಗಿದೆ. ರಾತ್ರಿ ಊಟ ಮಾಡಿದ ನಂತರ ಸಾಂಬಾರು ಸರಿಯಿಲ್ಲವೆಂದು ಉಳಿದ ಮಕ್ಕಳಿಗೆ ತಿನ್ನಿಸದಿರುವ ಸಿಬ್ಬಂದಿ ತಕ್ಷಣ ಸಾಂಬಾರ್ ಹಳಸಿದೆಯೋ, ವಿಷಪೂರಿತವೋ ಎಂದು ನಿರ್ಧರಿಸಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರೆ ಮಕ್ಕಳು ಸಾಯುತ್ತಿರಲಿಲ್ಲ. ಒಟ್ಟಾರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.

ಹಾಸ್ಟೆಲ್‍ನಲ್ಲಿ 29 ಮಂದಿ ವಿದ್ಯಾರ್ಥಿ ಗಳಿದ್ದು, ತಿಂಗಳಿಗೆ 3 ಸಾವಿರ ರೂ. ಪಡೆಯಲಾಗುತ್ತಿದೆ. ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಅಡ್ಮಿಷನ್ ಹಣವಾಗಿ ವರ್ಷಕ್ಕೆ 20 ಸಾವಿರ ರೂ. ಪಡೆಯುತ್ತಿದ್ದಾರೆ. ಆದರೂ ಶಿಕ್ಷಕರು, ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುತ್ತಿದ್ದು, ತಕ್ಷಣ ಸಿಬಿಎಸ್‍ಇ ಮಾರ್ಗಸೂಚಿಯಂತೆ ಸಂಬಳ ನೀಡಲು ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ, ತಕ್ಷಣ ಹಾಸ್ಟೆಲ್ ನಿಲ್ಲಿಸುವಂತೆ ಸೂಚಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ .ಎಸ್.ಜಿ.ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ್, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ, ಡಿವೈಎಸ್‍ಪಿ ವೇಣುಗೋಪಾಲ್, ಡಿ.ಡಿ.ನಂಜೇಗೌಡ, ಉಪಬಿಭಾಗಾಧಿಕಾರಿ ಶಿಲ್ಪಾ, ವಸುಂಧರಾ ಭೂಪತಿ, ಪ್ರಭಾ, ಜ್ಯೋತಿ ಮತ್ತಿತರರು ಹಾಜರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin