ಕಾಶ್ಮೀರದಲ್ಲಿ ಭೂ ಕುಸಿತ, ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Jammu-Kashmir-01

ಶ್ರೀನಗರ,ಮಾ.13-ಕಣಿವೆ ರಾಜ್ಯದ ಹಲವು ಕಡೆ ಮತ್ತೆ ಭೂ ಕುಸಿತ ಉಂಟಾಗಿರುವುದರಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಸಂಚಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸಂಭವಿಸಿರುವ ಭೂ ಕುಸಿತದಿಂದ ಪಂತ್ಯಾಲ ಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದ್ದು , ಶ್ರೀನಗರ-ಜಮ್ಮು ನಡುವಿನ ಒಟ್ಟು 300 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಕಳೆದ ವಾರ ಭಾರೀ ಮಳೆಯಿಂದಾಗಿ ಬನಿಯಾಲ್ ಮತ್ತು ರಾಮ್‍ಬನ್ ಪ್ರದೇಶದ ಹಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ಕಳೆದ 5 ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ನಿನ್ನೆಯಷ್ಟೇ ಒಂದು ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಆದರೆ ಇಂದು ಬೆಳಗ್ಗೆ ಮತ್ತೆ ಸಂಭವಿಸಿದ ಭೂ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಬಂದ್ ಮಾಡಲಾಗಿದೆ.   ಭೂ ಕುಸಿತದಿಂದ ರಸ್ತೆಗೆ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಸಂಚಾರಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಂಚಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin