ಎಸಿಬಿ ದಾಳಿ ವೇಳೆ ನೋಟುಗಳನ್ನು ನುಂಗಿದ ಎಎಸ್‍ಐ

ಈ ಸುದ್ದಿಯನ್ನು ಶೇರ್ ಮಾಡಿ

500-Note-s01

ಮೈಸೂರು, ಮಾ.14- ಎಸಿಬಿ ದಾಳಿ ವೇಳೆ ನೋಟುಗಳನ್ನೇ ನುಂಗಿದ್ದ ಎಎಸ್‍ಐ ಅವರನ್ನು ಇಂದು ಬೆಳಗ್ಗೆ ಮೈಸೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಪಘಾತಕ್ಕೀಡಾಗಿದ್ದ ಆಟೋ ಚಾಲಕನಿಗೆ ಆಟೋ ಹಿಂದಿರುಗಿಸಲು 2 ಸಾವಿರ ರೂ. ಲಂಚ ಪಡೆಯುತ್ತಿದ್ದ ನಗರದ ಕೆಆರ್ ಸಂಚಾರಿ ಠಾಣೆಯ ಎಎಸ್‍ಐ ಎಂ.ಜಿ.ರಮೇಶ್ ಹಾಗೂ ಕಾನ್ಸ್‍ಟೆಬಲ್ ಎನ್.ಎಂ.ಮಲ್ಲೇಶ್ ಎಸಿಬಿ ಬಲೆಗೆ ಬಿದ್ದಿದ್ದರು. ಇವರನ್ನು ವಿಚಾರಣೆಗೆ ಠಾಣೆಗೆ ಕರೆದೊಯ್ಯುತ್ತಿದ್ದಾಗ 500ರೂ. ಮುಖಬೆಲೆಯ 4 ನೋಟುಗಳನ್ನು ರಮೇಶ್ ಅವರು ನುಂಗಿದ್ದರು. ಇದನ್ನು ಗಮನಿಸಿದ ಎಸಿಬಿ ಪೊಲೀಸರು ತಕ್ಷಣ ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಸ್ಕ್ಯಾನಿಂಗ್ ವೇಳೆ ಇವರ ದೇಹದಲ್ಲಿ ನೋಟುಗಳು ಇರುವುದು ಪತ್ತೆಯಾಗಿದೆ.  ಇಂದು ಬೆಳಗ್ಗೆ ಎಎಸ್‍ಐ ರಮೇಶ್ ಹಾಗೂ ಕಾನ್ಸ್‍ಟೆಬಲ್ ಮಲ್ಲೇಶ್ ಅವರನ್ನು ಮೈಸೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಘಟನೆ ವಿವರ:

ನಗರದ ಕೈಲಾಸಪುರಂ ವಾಸಿಯೊಬ್ಬರ ಆಟೋ ಕೆಆರ್ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಆಟೋ ಚಾಲಕನಿಂದ ಎಎಸ್‍ಐ ಅವರು ದಾಖಲಾತಿಗಳನ್ನು ಪಡೆದಿದ್ದರು. ತದನಂತರ ದಾಖಲಾತಿ ಮತ್ತು ಆಟೋವನ್ನು ಹಿಂದಿರುಗಿಸುವಂತೆ ಚಾಲಕ ಕೇಳಿದಾಗ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಎಸಿಬಿ ಎಸ್‍ಪಿ ಬಿ.ಟಿ.ಕವಿತಾ ಅವರಿಗೆ ಆಟೋ ಚಾಲಕ ದೂರು ನೀಡಿದ್ದರು.

ನಿನ್ನೆ ಸಂಜೆ ಠಾಣೆ ಹಿಂಭಾಗದಲ್ಲಿರುವ ತಂಪು ಪಾನೀಯ ಅಂಗಡಿ ಬಳಿ ಚಾಲಕನಿಂದ ಎಎಸ್‍ಐ ರಮೇಶ್ ಹಾಗೂ ಕಾನ್ಸ್‍ಟೆಬಲ್ ಮಲ್ಲೇಶ್ 2 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ನಡೆಸಿ ಇವರಿಬ್ಬರನ್ನೂ ವಶಕ್ಕೆ ಪಡೆದು ಹಣದ ಬಗ್ಗೆ ವಿಚಾರಿಸಿದಾಗ, ಈ ಹಣ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ ದಂಡದ ರೂಪದಲ್ಲಿ ಪಡೆದುದ್ದಾಗಿ ಹೇಳಿದ್ದಾರೆ.   ರಶೀದಿ ತೋರಿಸುವಂತೆ ಕೇಳಿದಾಗ ರಮೇಶ್ ಅವರ ಬಳಿಯಿದ್ದ ಹಣಕ್ಕೂ, ರಶೀದಿಗೂ ಹೊಂದಾಣಿಕೆಯಾಗದ ಕಾರಣ ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ರಮೇಶ್ ಅವರು ನೋಟುಗಳನ್ನು ನುಂಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸ್ಕ್ಯಾನಿಂಗ್ ವೇಳೆ ಅವರ ದೇಹದಲ್ಲಿ ನೋಟುಗಳಿರುವುದು ಪತ್ತೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin