ಬಿಬಿಎಂಪಿಗೆ ‘ದಿವಾಳಿ ಭಾಗ್ಯ’ ಕರುಣಿಸಿದ ಕಾಂಗ್ರೆಸ್‍ : ಎನ್.ಆರ್.ರಮೇಶ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

NR-Ramehs

ಬೆಂಗಳೂರು, ಮಾ.14-ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ತುಘಲಕ್ ದರ್ಬಾರಿನಿಂದ ಬಿಬಿಎಂಪಿಯ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಸ್ವಜನಪಕ್ಷಪಾತ, ಗೊತ್ತುಗುರಿ ಇಲ್ಲದೆ ಅನುದಾನ ಹಂಚಿಕೆ, ಕಾನೂನು ಬಾಹಿರ ಕ್ರಮಗಳಿಂದ ಪಾಲಿಕೆ ಅಧೋಗತಿಯತ್ತ ಸಾಗಿದೆ ಎಂದು ಹೇಳಿದರು.  ಈಗಾಗಲೇ ಬಿಡಿಎ ಆರ್ಥಿಕ ದಿವಾಳಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಹುಚ್ಚಾಟ ಹಾಗೂ ಮುಖ್ಯಮಂತ್ರಿಗಳ ನಿರ್ಲಕ್ಷ್ಯ ಧೋರಣೆ ಬೆಂಗಳೂರು ಅಭಿವೃದ್ದಿ ಸಚಿವರ ಹಣಬಾಕತನದಿಂದ ಬಿಬಿಎಂಪಿಯೂ ಕೂಡ ಅದೇ ಹಾದಿಯಲ್ಲಿ ಸಾಗುತ್ತಾ ನಗರದ ಜನರಿಗೆ ದಿವಾಳಿಭಾಗ್ಯ ಕರುಣಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ 425 ಬಿಡಿಎ ನಿವೇಶನಗಳನ್ನು ರಾಜ್ಯ ಸರ್ಕಾರ ಅಡಮಾನವಿಟ್ಟು 574 ಕೋಟಿ ರೂ.ಗಳ ಸಾಲ ಪಡೆದಿದೆ ಎಂಬ ದಾಖಲೆಗಳನ್ನು ಬಿಡುಗಡೆ ಮಾಡಿದರು.  2015-16ಕ್ಕೂ ಮೊದಲು ಕಾರ್ಯಾದೇಶಪತ್ರಗಳನ್ನು ನೀಡಿದ್ದರೂ ಕಾಮಗಾರಿಗಳನ್ನು ಪ್ರಾರಂಭಿಸದ ಎಲ್ಲಾ ಕಾಮಗಾರಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಕಾರ್ಯಾದೇಶ ಪತ್ರಗಳನ್ನು ಪಡೆದು ಮೂರ್ನಾಲ್ಕು ವರ್ಷಗಳಿಂದಲೂ ಕಾಮಗಾರಿಗಳನ್ನು ಪ್ರಾರಂಭಿಸದ ಎಲ್ಲಾ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ರಮೇಶ್ ಒತ್ತಾಯಿಸಿದರು.

ಜಾಬ್‍ಕೋಡ್‍ಗಳನ್ನು ಪಡೆದು ಇನ್ನೂ ಟೆಂಡರ್‍ಗಳನ್ನು ಆಹ್ವಾನಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ನಗರದ ಕಾಂಗ್ರೆಸ್ ಶಾಸಕರು, ಅಧಿಕಾರಿಗಳು, ಗುತ್ತಿಗೆದಾರರು ಒಟ್ಟಾಗಿಯೇ ಬಿಬಿಎಂಪಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಒಂದು ವರ್ಷಕ್ಕೂ ಮೊದಲೇ ಜಾಬ್‍ಕೋಡ್‍ಗಳನ್ನು ಪಡೆದು ಇನ್ನೂ ಆಹ್ವಾನಿಸದೆ ಇರುವ ಟೆಂಡರ್‍ಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದ ಅವರು, ಇದಕ್ಕೆ ಸಂಬಂಧಿಸಿದ 1117 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.
2013ರಿಂದ 2016-17ರವರೆಗೆ 11,217 ಕೋಟಿ ಮುಂದುವರೆದ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ನಾಲ್ಕು ವರ್ಷಗಳಲ್ಲಿ ಬೃಹತ್ ಅನುದಾನವಿದ್ದರೂ ಶೇ.25ರಷ್ಟು ಕೆಲಸವಾಗಿಲ್ಲ. ಬಿಬಿಎಂಪಿಯಲ್ಲಿ 117 ಕಾರ್ಯನಿರತ ಖಾತೆಗಳಿವೆ. ಆದರೆ ಅವುಗಳಲ್ಲಿರುವ ಮೊತ್ತ 1421 ಕೋಟಿ ರೂ. ಮಾತ್ರ. ಹೀಗಾಗಿ ಪಾಲಿಕೆ ದಿವಾಳಿ ಅಂಚಿಗೆ ತಲುಪುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಒಟ್ಟಾರೆ 12,925 ಕೋಟಿ ಹಣವನ್ನು ಬಿಬಿಎಂಪಿಗೆ ಬಿಡುಗಡೆ ಮಾಡಿ ಈಗಾಗಲೇ ಕಾರ್ಯಾದೇಶ ಪತ್ರ ಪಡೆದರೂ ಕೆಲಸ ಆರಂಭಿಸದ, ಟೆಂಡರ್ ಕರೆಯದ ಕಾಮಗಾರಿಗಳನ್ನು ರದ್ದುಪಡಿಸಬೇಕು ಎಂದು ರಮೇಶ್ ಆಗ್ರಹಿಸಿದರು.

ಕಳೆದ ಎರಡು ವರ್ಷಗಳ ಬಿಬಿಎಂಪಿ ಆಡಳಿತಾವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಆರ್ಥಿಕ ದುರ್ಬಳಕೆಯಾಗಿದೆ. ಈ ಅವಧಿಯಲ್ಲಿ ಮುಂದುವರೆದ ಕಾಮಗಾರಿಗಳ ಮೊತ್ತ 11,037.44 ಕೋಟಿ ರೂ.ಗಳು ಇದೇ ಅವಧಿಯಲ್ಲಿ ಗುತ್ತಿಗೆದಾರರಿಗೆ ಇರುವ ಮೊತ್ತ 1,218 ಕೋಟಿ ರೂ. ಹಿರಿತನದ ಆಧಾರದಲ್ಲಿ ಪಾವತಿ ಮಾಡಲು ಕೋರಿ ಸಲ್ಲಿಸಿರುವ ಬಿಲ್‍ಗಳ ಮೊತ್ತ 700 ಕೋಟಿ ರೂ.ಗಳು.   ನಾಲ್ಕು ವರ್ಷಗಳಲ್ಲಿ ಬಾಕಿ ಇರುವ ಬಿಲ್‍ಗಳ ಮೊತ್ತ 12,955 ಕೋಟಿ ರೂ.ಗಳು. ಮುಂದುವರೆದ ಕಾಮಗಾರಿಗಳ ಮಾಹಿತಿಯನ್ನು ಪಾಲಿಕೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದ್ದಾರೆ. ಆರ್.ಆರ್.ನಗರ, ಯಶವಂತಪುರ, ಕೆ.ಆರ್.ಪುರ, ಬ್ಯಾಟರಾಯನಪುರ, ಮಹಾಲಕ್ಷ್ಮಿಪುರ, ಗಾಂಧಿನಗರ ಈ ಆರು ಕ್ಷೇತ್ರಗಳಿಗೆ ಮಾತ್ರವೇ ಮುಂದುವರೆದ ಕಾಮಗಾರಿಗಳಿಗೆ 2 ಸಾವಿರ ಕೋಟಿ ರೂ.ಗಳ ಅನುದಾನ ನೀಡಿ ಪಕ್ಷಪಾತ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನದಿ ನೀರಿನಂತೆ ಹರಿದು ಹೋಗಿದೆ. ಮುಂಬೈ ನಗರ ಪಾಲಿಕೆಯಂತೆ ತ್ರೈಮಾಸಿಕ ಲೆಕ್ಕಪರಿಶೋಧನಾ ಪದ್ಧತಿಯನ್ನು ಜಾರಿಗೆ ತರಬೇಕೆಂದು ರಮೇಶ್ ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin