ಮಾದಕ ವಸ್ತು ಮಾರಾಟ ಜಾಲ ಹತ್ತಿಕ್ಕಲು ಸರ್ಕಾರ ಬದ್ಧ : ಗೃಹ ಸಚಿವ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Session-Parameshwar

ಬೆಂಗಳೂರು, ಮಾ.16-ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.  ಮಾದಕ ವಸ್ತುಗಳ ಮಾರಾಟವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಸದಸ್ಯ ವಿ.ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಫೀಮು, ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟ ಪ್ರಕರಣ ಹೆಚ್ಚುತ್ತಲೇ ಇದೆ. 2015-17 ರಲ್ಲಿ 23 ಪ್ರಕರಣಗಳನ್ನು ದಾಖಲಿಸಿದ್ದು, 31 ಜನರನ್ನು ಬಂಧಿಸಲಾಗಿದೆ ಎಂದರು.

ಇದರ ಹಿಂದೆ ಅಂತಾರಾಷ್ಟ್ರೀಯ ಜಾಲವೇ ಇದೆ. ಚಾಕೊಲೇಟ್, ಮಾತ್ರೆಗಳಲ್ಲಿಟ್ಟು ಮಾರಾಟ ಮಾಡುತ್ತಾರೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುವುದನ್ನು ತಡೆಗಟ್ಟಬೇಕಾದರೆ ತುರ್ತು ಕ್ರಮದ ಅಗತ್ಯವಿದೆ ಎಂದರು. ಆಫ್ರಿಕನ್ ಪ್ರಜೆಗಳ ವೀಸಾ ಅವಧಿ ಮುಗಿದರೂ ವಿದ್ಯಾರ್ಥಿಗಳ ಇಲ್ಲಿಯೇ ಉಳಿಯುತ್ತಾರೆ. ಮೂರು ತಿಂಗಳೊಳಗೆ ವೀಸಾ ನವೀಕರಿಸಿಕೊಳ್ಳಬೇಕು, ಇಲ್ಲದಿದ್ದರೆ ಅವರನ್ನು ಗಡಿಪಾರು ಮಾಡಬೇಕೆಂಬ ನಿಯಮವಿದೆ. ಆದರೆ ಡ್ರಗ್ ಮಾಫಿಯಾದಲ್ಲಿ ಸಿಲುಕಿರುವವರು ಮುಂಗಡವಾಗಿಯೇ ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಅವರ ಮೇಲೆ ದೂರು ನೀಡಿದರೆ ಗಡಿಪಾರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಈ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ ಎಂದರು.

48 ಪೊಲೀಸ್ ಠಾಣೆಗಳಲ್ಲಿ ಇದರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡುವುದು ಕೇಂದ್ರ ವಿದೇಶಾಂಗ ಇಲಾಖೆ. ನಾವು ಅವರಿಗೆ ಪತ್ರ ಬರೆಯಬಹುದೇ ಹೊರತು ಹೆಚ್ಚಿನ ಅವಕಾಶವಿಲ್ಲ. ಆದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲೇ ಮಾದಕ ವಸ್ತುಗಳ ಮಾರಾಟ ಕುರಿತು ಮಾಹಿತಿ ದೊರೆತರೆ ಕೂಡಲೇ ಕ್ರಮಕೈಗೊಳ್ಳುವುದಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin