ಶೀಘ್ರದಲ್ಲೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ ; ಆಂಜನೇಯ

ಈ ಸುದ್ದಿಯನ್ನು ಶೇರ್ ಮಾಡಿ

H.Anjaneya-Session

ಬೆಂಗಳೂರು,ಮಾ.16-ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸಚಿವ ಎಚ್.ಆಂಜನೇಯ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಗೋವಿಂದ ಎಂ.ಕಾರಜೋಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿಯೊಂದು ಜಾತಿ-ಜನಾಂಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ವರದಿ ಸಿದ್ದಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ.

ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ಸಾಮಾಜಿಕ ನ್ಯಾಯದ ಬದ್ಧತೆ ಆಧಾರದಲ್ಲಿ ಜಾರಿಗೆ ತರಲಾಗುವುದು. ಸಮೀಕ್ಷಾ ವರದಿ ಮಾಹಿತಿ ಸೋರಿಕೆಯಾಗಿಲ್ಲ. ಇದು ಜಾತಿ, ಜಾತಿಗಳ ನಡುವೆ ಸಂಘರ್ಷ ತರುವುದಿಲ್ಲ. ಆದರೆ ಬೆಸುಗೆಯಾಗಲೂ ಸಹಕಾರಿಯಾಗುತ್ತದೆ. ಎಲ್ಲ ಜಾತಿಯಲ್ಲಿ ಬಡವರಿದ್ದಾರೆ. ಎಲ್ಲರಿಗೂ ಸಮಪಾಲು ದೊರೆಯಬೇಕೆಂಬುದೇ ಸರ್ಕಾರದ ಉದ್ದೇಶ ಎಂದರು.   ಹಿಂದಿನ ವರದಿಗಳನ್ನು ಸರ್ಕಾರ ಪರಿಗಣಿಸಬೇಕಿಲ್ಲ. ಹೊಸ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.  ಗೋವಿಂದ ಕಾರಜೋಳ ಮಾತನಾಡಿ, ಶಂಕರಪ್ಪ ನೇತೃತ್ವದ ಆಯೋಗವು ವರದಿ ನೀಡಿ 15 ವರ್ಷ ಕಳೆದರೂ ಮರಾಠ ಸಮಾಜದವರನ್ನು ಹಿಂದುಳಿದ ವರ್ಗಗಳ ಪ್ರವರ್ಗ 3ಬಿಯಿಂದ 2ಎಗೆ ಸೇರಿಸಲು ಅನುಷ್ಠಾನವಾಗಿಲ್ಲ ಎಂದರು.

ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ವರದಿ ಜಾತಿ ಜಾತಿಗಳ ನಡುವೆ ವೈಷಮ್ಯಕ್ಕೆ ಎಡೆ ಮಾಡಿಕೊಡಲಿದೆ. ಹಾಗಾಗಿ ಆಯೋಗದ ವರದಿಗಳನ್ನು ಸದನದ ಮುಂದೆ ಮಂಡಿಸಲು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮರಾಠ ಮೀಸಲಾತಿಯ ಬಗ್ಗೆ ನಿಖರ ಉತ್ತರ ಕೊಡಿ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಎಷ್ಟು ದಿನದಲ್ಲಿ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.   ಈ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶೆಟ್ಟರ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಆಡಳಿತ ಪಕ್ಷದ ನಾಯಕ ಕೆ.ಎನ್.ರಾಜಣ್ಣ ಮಧ್ಯಪ್ರವೇಶಿಸಿ ಕೆಲವು ಜಾತಿಗಳನ್ನು ಯಾವುದೇ ಪಟ್ಟಿಗೂ ಸೇರಿಸಿಲ್ಲ. ಅವೈಜ್ಞಾನಿಕ ವರ್ಗೀಕರಣವಾಗಿದೆ. ಆರ್ಯ ವೈಶ್ಯ ಸಮಾಜವನ್ನು ಯಾವುದೇ ಪಟ್ಟಿಗೂ ಸೇರಿಸಿಲ್ಲ. ಇದನ್ನು ಸರಿಪಡಿಸಬೇಕೆಂದರು.   ಇದಕ್ಕೆ ಉತ್ತರಿಸಿದ ಆಂಜನೇಯ, ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದಲೇ ಈ ಸಮೀಕ್ಷೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin