ಇದೊಂದು ಚುನಾವಣಾ ದೃಷ್ಠಿಯ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ,ಮಾ.17- ತಾಲೂಕು ರಚನೆ ಮತ್ತು ಘೋಷಣೆ ಎಂಬುದು, ಈ ಹಿಂದೆ ನಮ್ಮ ಸರಕಾರ ಇದ್ದಾಗಲೇ ಆಗಿರುವಂಥವು. ಅವರ ಮರು ಘೋಷಣೆ ಮಾಡುವ ಮೂಲಕ ಹೊಸದೇನನ್ನೂ ಸಾಧಿಸಿಲ್ಲ. ಇದು ಮುಂದೆ ಬರುವ ಸರಕಾರಕ್ಕೆ ಹೊರೆಯಾಗಲಿದೆ. ಇದೆಲ್ಲಾ ಚುನಾವಣಾ ಗಿಮಿಕ್ ಅಷ್ಟೇ. ಜನರಿಗೆ ಅರ್ಥವಾಗುತ್ತೆ, ಮುಂಬರುವ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆ.ಮುಖ್ಯವಾಗಿ ಸತತ ಬರಗಾಲದಿಂದ ತತ್ತರಿಸಿ ಹೋಗಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಸಾಲ ಮನ್ನಾ ಮಾಡಬೇಕಿತ್ತು. ಅದು ಬಹು ಜನರ ಬೇಡಿಕೆ ಹಾಗೂ ನಿರೀಕ್ಷೆಯಾಗಿತ್ತು. ಅದನ್ನೇ ಮಾಡದೇ ಈ ಹಿಂದಿನ ಹಳೆಯದನ್ನೇ ಮತ್ತೆ ಓದಿ ಜನರನ್ನು ಮರಳು ಮಾಡುವ ತಂತ್ರ ಉಪಯೋಗಿಸಲಾಗಿದೆ ಹೊರತು ಪ್ರಗತಿಪರವಾಗಲೀ ಅಥವಾ ಜನಪರವಾಗಲೀ ಏನೂ ಈ ಬಜೆಟ್‍ನಲ್ಲಿ ಇಲ್ಲ ಎಂದು ಮಾಜಿ ಶಾಸಕ ಬಿಜೆಪಿಯ ವೀರಣ್ಣ ಚರಂತಿಮಠ ಟೀಕಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಟ್ಟೆ, ಜನರಿಗೆ ಅಕ್ಕಿ ಕೊಟ್ಟೆ ಎಂಬುದು ಒಳ್ಳೆಯದೆ. ಆದರೆ ಇದು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹಾಗೂ ಜನರ ಜೀವನ ಮಟ್ಟವನ್ನು ಸುಧಾರಿಸುವುದಿಲ್ಲ. ಅದನ್ನು ಬಿಟ್ಟು ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿತ್ತು, ಉದ್ಯಮಗಳಿಗೆ ಆದ್ಯತೆ ನೀಡಬೇಕಿತ್ತು. ವಿಶೇಷವಾಗಿ ನಮ್ಮ ಜಿಲ್ಲೆಗಂತೂ ಈ ಬಾರಿ ಏನೂ ನೀಡದೇ ಅನ್ಯಾಯ ಮಾಡಿದ್ದಾರೆ. ಮುಖ್ಯವಾಗಿ ಮುಳುಗಡೆ ಜನರ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಲೀ, ವಿಶೇಷ ಅನುದಾನವಾಗಲೀ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹೊಸ ವಿವಿ ಸ್ಥಾಪಿಸುತ್ತೇವೆ ಎಂದದ್ದು ಗುಣಮಟ್ಟದ ಶಿಕ್ಷಣಕ್ಕೆ ಹಿನ್ನಡೆಯಾಗುವ ನಿರ್ಧಾರ.

ಈಗಿರುವ ವಿವಿಗಳ ಗುಣಮಟ್ಟ ಸುಧಾರಿಸಿದರೆ ಸಾಕಿದೆ, ಅಲ್ಲದೇ ಖಾಸಗಿ ಕಾಲೇಜುಗಳಿಗೆ ಸೂಕ್ತ ಪ್ರಮಾಣದ ಪ್ರೋತ್ಸಾಹ ನೀಡಿದರೆ ಎಷ್ಟೋ ಉಪಯೋಗವಾಗುತ್ತಿತ್ತು. ಅದು ಬಿಟ್ಟು ಜಿಲ್ಲೆಗೊಂಡು ವಿವಿ ಮಾಡಿ ವಿವಿಯ ಮಟ್ಟವನ್ನು ಹಾಳುಗೆಡವಲಾಗುತ್ತಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಬಾದಾಮಿ ತಾಲೂಕಿನಲ್ಲಿ ಮಾಡಲುದ್ದೇಶಿಸಿದ್ದ ಶಿಲ್ಪಕಲಾ ವಿವಿ ಆರಂಭಿಸುವದು ಮರತೇ ಹೋದಂತಾಗಿದೆ ಎಂದಿದ್ದಾರೆ.ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುತ್ತೇವೆ ಎಂಬ ನಿರ್ಧಾರ ಹಳೆಯದ್ದೇ, ಅದನ್ನೇ ಎರಡೆರಡು ಸಲ ಹೇಳಿ ಶಭಾಷ್ ಎನಿಸಿಕೊಳ್ಳುವ ಕಾರ್ಯ ಮಾಡಿದ್ದಾರೆ.

ಅಲ್ಲದೆ ಈ ಹಿಂದಿನ ಘೋಷಣೆಗಳಾದ ಮಿನಿ ತಾರಾಲಯ, ಐಟಿ ಪಾರ್ಕ್, ಐಹೊಳೆ ಸ್ಥಳಾಂತರ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ, ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿ, ಸಾಂಕ್ರಾಮಿಕ ರೋಗ ಪ್ರಯೋಗಾಲಯ, ಗದ್ದನಕೇರಿಯಲ್ಲಿ ಬಂಜರ ಆರ್ಥಿಕ ಹಾಗೂ ಸಾಂಸ್ಕೃತಿಕ  ಕೇಂದ್ರ, ಬಾದಾಮಿಯಲ್ಲಿ ಶಿಲ್ಪಕಲಾ ವಿವಿಯ ಸ್ಥಾಪನೆ ಕನಸಾಗಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.2016ರಲ್ಲಿ ಪಟ್ಟದಕಲ್, ಐಹೊಳೆ ಮುಚಖಂಡಿ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದಾಗಿ ಪ್ರಸ್ತಾಪ ಆಗಿತ್ತು. ಅದರಲ್ಲಿ ಮುಚಖಂಡಿ ಕೆರೆಗೆ ನೀರು ತುಂಬಿಸುವ ಯೋಜನೆ ನಡೆದಿದೆ ಅಷ್ಟೇ. ಇನ್‍ಕ್ಯುಬೇಟರ್ ಸ್ಥಾಪನೆ, ಮತ್ತು ಇನ್ಸ್ಟ್ರುಮೆಂಟೇಷನ್ ಕೇಂದ್ರ ಆರಂಭ, ಒಂದು ಕೋಟಿ ವೆಚ್ಚದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಯಾವುದೆಂದರೆ ಯಾವುದೂ ಸೂಕ್ತ ಪ್ರಮಾಣದಲ್ಲಿ ಸಾಗದೇ ಬಜೆಟ್ ಎಂದರೆ ನಿರಾಸೆಯ ಗೂಡಾಗಿ ಪರಿಣಮಿಸಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin