ಕನ್ನಡ ವಿರೋಧಿ ಅಧಿಕಾರಿಗಳ ದರ್ಪಕ್ಕೆ ಕಡಿವಾಣ ಹಾಕುವವರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

Kannada-Mataadi

ಬೆಂಗಳೂರು,ಮಾ.18- ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳು ಕನ್ನಡ ಭಾಷೆಯನ್ನು ಕಾಲಕಸದಂತೆ ಕಾಣುತ್ತಿದ್ದಾರೆ. ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣನ್‍ರವರ ವರ್ತನೆ ಬೆಳಕಿಗೆ ಬಂದಿದೆ. ಆದರೆ ಕನ್ನಡ ವಿರೋಧಿ ದರ್ಪ ತೋರುವ ಸಾಕಷ್ಟು ಅಧಿಕಾರಿಗಳು ರಾಜ್ಯದಲ್ಲಿದ್ದಾರೆ.   ಇವರು ನಮ್ಮ ನೆಲ, ಜಲ, ಭಾಷೆ ಮತ್ತು ಸಂಸ್ಕøತಿಗೆ ಮನ್ನಣೆ ನೀಡುವುದೇ ಇಲ್ಲ. ಕೇವಲ ಆಡಳಿತದ ಗತ್ತು ಗೈರತ್ತು ಅಷ್ಟೇ ಇವರಿಗೆ ಸೀಮಿತ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ.

ಸ್ಥಳೀಯ ಜನರ ನಾಡಿಮಿಡಿತ ಗೊತ್ತಿರುವುದಿಲ್ಲ. ಹಾಗಾಗಿ ಇವರದೇ ದರ್ಬಾರು, ಇಲ್ಲಿ ಇವರಿಗೆ ಯಾವುದೇ ಲಂಗು ಲಗಾಮಿಲ್ಲದಂತಾಗಿದೆ.   ಈ ಸರ್ಕಾರದಲ್ಲಂತೂ ಉತ್ತರ ಭಾರತದ ಅಧಿಕಾರಿಗಳ ಉದ್ದಟತನ ಮಿತಿ ಮೀರಿದೆ ಎಂದೇ ಹೇಳಬೇಕು. ಇವರಿಗೆ ಕಡಿವಾಣವೇ ಹಾಕುವವರೇ ಇಲ್ಲದಂತಾಗಿದೆ.
ಉತ್ತರ ಭಾರತದ ಐಎಎಸ್ , ಐಪಿಎಸ್, ಐಎಫ್‍ಎಸ್, ಐಆರ್ ಎಸ್ ಅಧಿಕಾರಿಗಳಿಗೆ ನಾಡಿನ ಜನರ ಸಮಸ್ಯೆ ಪರಿಹಾರಕ್ಕೆ ನಾಡಭಾಷೆಯ ಅರಿವಿರಬೇಕು. ನಾಡಿಮಿಡಿತ ಗೊತ್ತಿರಬೇಕು, ಆದರೆ ಇವರಿಗೆ ಇದ್ಯಾವುದರ ಅರಿವು ಇರುವುದಿಲ್ಲ.

ಇಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಮೊದಲು ಸ್ಥಳೀಯ ಭಾಷೆ ಅವರಿಗೆ ತಿಳಿದಿರಬೇಕು. ಆಗ ಮಾತ್ರ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದನ್ನು ಮಾಡದ ಅಧಿಕಾರಿಗಳು ಮನಬಂದಂತೆ ದರ್ಪ ಮೆರೆಯುತ್ತಾರೆ.   ಐಎಫ್‍ಎಸ್ ಅಧಿಕಾರಿಗಳಂತೂ ಜನಸಾಮಾನ್ಯರೊಂದಿಗೆ ಸಂಪರ್ಕವೇ ಇರುವುದಿಲ್ಲ. ಇದ್ದಿದ್ದರೆ ಇಷ್ಟೊಂದು ಕಾಡ್ಗಿಚ್ಚು ಉಂಟಾಗಿ ನಷ್ಟವಾಗುತ್ತಿರಲಿಲ್ಲವೇನೊ? ಐಪಿಎಸ್ ಅಧಿಕಾರಿಗಳು ನೇರವಾಗಿ ಮತ್ತು ಅನಿವಾರ್ಯವಾಗಿ ಜನರೊಂದಿಗೆ ಸಂಪರ್ಕದಲ್ಲಿರಬೇಕು ಹಾಗಾಗಿ ಬಹುತೇಕರು ಭಾಷೆ ಕಲಿಯುತ್ತಾರೆ. ಆದರೆ ದರ್ಪಕ್ಕೇನೂ ಕೊರತೆಯಿಲ್ಲ. ಆದರೂ ಇನ್ನು ಕೆಲವು ಅಧಿಕಾರಿಗಳು ನಾಡಿನ ಭಾಷೆ ಕಲಿಯದೆ ಇಂಗ್ಲೀಷ್ ವ್ಯಾಮೋಹ ತೋರುತ್ತಿದ್ದಾರೆ.

ಐಎಎಸ್ ಅಧಿಕಾರಿ ಶ್ರೀವತ್ಸ ಅವರ ಬಳಿ ದೂರು ತೆಗೆದುಕೊಂಡು ಹೋದವರಿಗೆ ಮತ್ತು ಕಡತಗಳನ್ನು ತೆಗೆದುಕೊಂಡು ಹೋಗುವ ಕೆಳಗಿನ ಅಧಿಕಾರಿಗಳಿಗೆ ಕನ್ನಡದಲ್ಲಿ ಕಡತ ತಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಇಂಗ್ಲೀಷ್‍ನಲ್ಲಿ ತರುವಂತೆ ಧಮ್ಕಿ ಹಾಕಿದ್ದಾರೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಸಾಕಷ್ಟು ನಿದರ್ಶನ ನಮ್ಮ ನಾಡಿನಲ್ಲಿ ಸಿಗುತ್ತದೆ.   ಒಡಿಶಾದಿಂದ ಬಂದಂತಹ ಕೆಲ ಅಧಿಕಾರಿಗಳ ಸಂಬಂಧಿಕರ ಸುಮಾರು ಆರು ಸಾವಿರಕ್ಕೂ ಹೆಚ್ಚು ಫ್ಲಾಟ್‍ಗಳು ಈಗ ಬೆಂಗಳೂರಿನಲ್ಲಿವೆ. ಇದೇ ರೀತಿ ಬಿಹಾರ, ಉತ್ತರಪ್ರದೇಶ, ಹರಿಯಾಣ ಸೇರಿದಂತೆ ಉತ್ತರಭಾರತದಿಂದ ಬಂದು ಕರ್ತವ್ಯದಲ್ಲಿರುವ ಅಧಿಕಾರಿಗಳ ಸಾವಿರಾರು ಫ್ಲಾಟ್‍ಗಳು ಅಪಾರ ಆಸ್ತಿಪಾಸ್ತಿ ಕರ್ನಾಟಕದಲ್ಲಿದೆ.

ಉತ್ತರ ಭಾರತದ ಹಲವೆಡೆಯಿಂದ ಬಂದ ಹಲವು ಅಧಿಕಾರಿಗಳ ಒಂದು ಕೂಟವೇ ಇಲ್ಲಿದೆ. ಇವರಿಗೆ ನಾಡಿನ ಬಗ್ಗೆ ಯಾವುದೇ ಕಾಳಜಿ ಇಲ್ಲ.
ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜುಗಳ ಪ್ರವೇಶ ಸಂದರ್ಭದಲ್ಲೂ ಕೂಡ ಇವರದೇ ದರ್ಬಾರು. ಇವರ ಕಡೆಯವರಿಗೆ ಸೀಟು ಕೊಡಿಸುವಲ್ಲಿ ಇವರು ಬ್ಯುಸಿ, ಇವರು ನಾಡಿನ ಅಭ್ಯುದಯಕ್ಕೆ ಕೆಲಸ ಮಾಡುವುದು ಅಷ್ಟಕಷ್ಟೇ.  ಭಾಷೆ ಸಂವಹನದೊಂದಿಗೆ ಸ್ಥಳೀಯರ ಜೊತೆ ಗೌರವದಿಂದ ನಡೆದುಕೊಳ್ಳುವ ಸೌಜನ್ಯವೂ ಕೂಡ ಹಲವರಿಗೆ ಇರುವುದಿಲ್ಲ. ಬಹುತೇಕ ಅಧಿಕಾರಿಗಳು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಅಲ್ಲೊಬ್ಬ , ಇಲ್ಲೊಬ್ಬ ಅಧಿಕಾರಿಗಳು ಮಾತ್ರ ಸೇವಾ ಮನೋಭಾವದಿಂದ ಜನಸಾಮಾನ್ಯರೊಂದಿಗೆ ಬೆರತು ಕೆಲಸ ಮಾಡುತ್ತಾರೆ. ಅದನ್ನು ಹೊರತುಪಡಿಸಿ ಉಳಿದವರ್ಯಾರು ಜನರೊಂದಿಗೆ ಬೆರೆಯುವುದಿಲ್ಲ.

ಜನರ ಸೇವೆ ಮಾಡಲೆಂದೇ ಸರ್ಕಾರ ಇವರಿಗೆ ಸಕಲ ಸವಲತ್ತುಗಳನ್ನು ನೀಡುತ್ತದೆ. ಆದರೆ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನಾಡುನುಡಿಗೆ ದ್ರೋಹ ಬಗೆಯುತ್ತಾರೆ. ಇವರ ಈ ಆರ್ಭಟಕ್ಕೆ ನಮ್ಮ ಜನಪ್ರತಿನಿಧಿಗಳೂ ಕಾರಣ.   ನಮ್ಮ ಜನಪ್ರತಿನಿಧಿಗಳು ಬಿಗಿಯಾಗಿದ್ದು , ಕನ್ನಡದಲ್ಲೇ ಮಾತನಾಡುವಂತೆ ಕಟ್ಟಪ್ಪಣೆ ಮಾಡಿದರೆ ಮುಲಾಜಿಲ್ಲದೆ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುತ್ತಾರೆ. ಆದರೆ ಅಧಿಕಾರಿಗಳ ದರ್ದಿಗೆ ಒಳಪಡುವ ನಮ್ಮ ರಾಜಕಾರಣಿಗಳು ನಾಡಿನ ಹಿತಾಸಕ್ತಿಗೆ ಕೆಲವೊಂದು ಬಾರಿ ವಿರೋಧವಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಆಡಳಿತದಲ್ಲಿ ಕನ್ನಡ ಕಡ್ಡಾಯ. ಶಿಕ್ಷಣ ಮಾಧ್ಯಮದಲ್ಲಿ ಕನ್ನಡ ಕಡ್ಡಾಯ ಎಂದು ಹೇಳಿದರೆ ಸಾಲದು. ಇವುಗಳನ್ನು ಸಮರ್ಥವಾಗಿ ಜಾರಿಗೊಳಿಸುವ ಅಧಿಕಾರಶಾಹಿಗಳು ಮೊದಲು ಭಾಷೆಯನ್ನು ಕಲಿತು ರೂಢಿಸಿಕೊಳ್ಳಬೇಕು ಮತ್ತು ಅದಕ್ಕೆ ಗೌರವ ಕೊಡಬೇಕು.  ಈ ಹಿಂದೆ ಕನ್ನಡ ಹೋರಾಟಗಾರರು, ಹಿರಿಯ ಪತ್ರಕರ್ತರು ಆದ ಪಾಟೀಲ್ ಪುಟ್ಟಪ್ಪನವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ ಸಂದರ್ಭದಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗ್ಡೆ ಅವರಿಗೆ ಶಿಫಾರಸು ಮಾಡಿದ್ದರು.  ರಾಮಕೃಷ್ಣ ಹೆಗ್ಡೆ ಅವರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದರು. ಆದರೆ ಪಾಟೀಲ್ ಪುಟ್ಟಪ್ಪನವರು ಬಿಟ್ಟಿರಲಿಲ್ಲ. ಕ್ರಮ ಕೈಗೊಳ್ಳಲೇ ಬೇಕು ಎಂದು ಪಟ್ಟು ಹಿಡಿದಿದ್ದರು. ಆಗ ರಾಮಕೃಷ್ಣ ಹೆಗಡೆ ಅವರು ಆ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಕನ್ನಡತನವನ್ನು ಮೆರೆದಿದ್ದರು.

ಅಂತಹ ಬದ್ಧತೆಯನ್ನು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಪ್ರದರ್ಶಿಸುತ್ತಾರೆಯೇ..? ಅಂತಹ ತಾಕತ್ತು ಅವರಿಗಿದೆಯೇ?
ರಾಜಕೀಯಕ್ಕೆ ಬಂದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕನ್ನಡ ಕಾಯುವ ಕಾಯಕಕ್ಕೆ ಬದ್ದರಾಗಿದ್ದ ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.   ಐಎಎಸ್, ಐಪಿಎಸ್, ಐ ಎಫ್ ಎಸ್, ಐಎಆರ್‍ಎಸ್ ಅಧಿಕಾರಿಗಳ ಇಂಥ ಕನ್ನಡ ವಿರೋಧಿ ಧೋರಣೆಯನ್ನು ಯಾವ ರೀತಿ ನಿಯಂತ್ರಿಸುತ್ತಾರೆ. ಕನ್ನಡವನ್ನು ರಕ್ಷಿಸಬೇಕಾದ ಅಧಿಕಾರಿಗಳೇ ಭಕ್ಷಣೆಗೆ ಮುಂದಾಗಿರುವ ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ಹಿಂದೆಯೂ ಕೂಡ ಹಲವಾರು ಘಟನೆಗಳು ನಡೆದಿವೆ. ಆದರೆ ಯಾವ ಅಧಿಕಾರಿಗಳ ವಿರುದ್ಧ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅಧಿಕಾರಿಗಳು ಕನ್ನಡದ ಬಗ್ಗೆ ಅಸಡ್ಡೆ , ನಿರ್ಲಕ್ಷ್ಯ ತೋರುತ್ತಾರೆ. ಇವರನ್ನು ನಿಯಂತ್ರಿಸಬೇಕಾದ ಹೊಣೆಗಾರಿಕೆ ಆಡಳಿತ ನಡೆಸಬೇಕಾದವರ ಕೈಯಲ್ಲಿದೆ.
ಐಎಎಸ್ ಅಧಿಕಾರಿ ಶ್ರೀವತ್ಸವ ಅವರ ಕನ್ನಡ ವಿರೋಧಿ ನಿಲುವಿನ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮೂರು ದಿನಗಳೊಳಗೆ ಅವರು ಉತ್ತರ ನೀಡಬೇಕು. ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಅವರ ಮೇಲೆ ವಾಗ್ದಂಡನೆ ವಿಧಿಸಲು ಕೂಡ ಅವಕಾಶವಿದೆ.  ಒಕ್ಕೂಟದ ವ್ಯವಸ್ಥೆಯಲ್ಲಿ ನೆಲದ ಕಾನೂನು ಎಲ್ಲರೂ ಗೌರವಿಸಲೇಬೇಕು. ಅವರು ಗೌರವಿಸದಿದ್ದರೆ ನಮ್ಮ ರಾಜ್ಯದಲ್ಲಿ ಇರಲು ಅರ್ಹರಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

  + ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಹೊರಗಿನವರಿಂದ ನಮ್ಮ ಕನ್ನಡಕ್ಕೆ ಧಕ್ಕೆಯಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ನಾಡಭಾಷೆಗೆ ಯಾರೇ ದ್ರೋಹ ಬಗೆದರೂ ಅದನ್ನು ನಾವು ಸಹಿಸುವುದಿಲ್ಲ. ಅವರ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

+ ವಾಟಾಳ್ ನಾಗರಾಜ್, ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ

 

ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲಿ ಮಾಡಬೇಕು ಎಂಬ ನಿಯಮವಿದೆ. ಆದರೂ ಕೆಲವು ಐಎಎಸ್ ಅಧಿಕಾರಿಗಳು ಈ ವಿಷಯದಲ್ಲಿ ಉದ್ದಟತನ ತೋರುತ್ತಿದ್ದಾರೆ. ಇಂಥವರಿಗೆ ನಾವೆಲ್ಲ ಒಟ್ಟಾಗಿ ಬುದ್ದಿ ಕಲಿಸಬೇಕಾಗಿದೆ. ನಾವು ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳ ವಿರುದ್ದವಿಲ್ಲ. ನಮ್ಮ ನಾಡಭಾಷೆ ವಿರೋಧಿ ಧೋರಣೆ ಇರುವವರನ್ನು ವಿರೋಧಿಸುತ್ತೇವೆ ಎಂದರು.

+ ಟಿ.ಎ.ನಾರಾಯಣಗೌಡ, ಕರವೇ ಅಧ್ಯಕ್ಷ

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin