ಪ್ರಸಕ್ತ ಸಾಲಿನಲ್ಲಿ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ : ತನ್ವೀರ್ ಸೇಠ್

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait--01

ಬೆಂಗಳೂರು,ಮಾ.18-ಪ್ರಸಕ್ತ ಸಾಲಿನಲ್ಲಿ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಪರಿಷತ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸಾಲಿನಲ್ಲೇ ಮುದ್ರಿಸಲ್ಪಟ್ಟ ಪಠ್ಯ ಪುಸ್ತಕಗಳನ್ನು ಅಳವಡಿಸುತ್ತಿರುವುದರಿಂದ ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣೆ ಇರುವುದಿಲ್ಲ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಅರುಣ್ ಶಹಪೂರ್, ರಾಮಚಂದ್ರಗೌಡ, ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
2017-18ನೇ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಲೆಕ್ಕಶಾಸ್ತ್ರ , ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳನ್ನೇ ಯಥಾವತ್ತಾಗಿ ಜಾರಿಗೊಳಿಸಲಾಗುತ್ತಿದ್ದು , ಈ ಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಿಂದಿನ ಸಾಲಿನಲ್ಲೇ ಮುದ್ರಿಸಲ್ಪಟ್ಟ ಪಠ್ಯಪುಸ್ತಕಗಳನ್ನೇ ಮುಂದುವರೆಸುತ್ತಿರುವುದರಿಂದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರಚಿಸಲಾಗಿಲ್ಲ. ಪಠ್ಯ ಪುಸ್ತಕಗಳ ಪರಿಷ್ಕರಣೆ ಕೈಗೊಳ್ಳದಿರುವುದರಿಂದ ಹಿಂದಿನ ಸಾಲಿನ ಪಠ್ಯಪುಸ್ತಕಗಳ ಮುದ್ರಣಕ್ಕೆ ಸೂಕ್ತ ವ್ಯವಸ್ಥೆ ಮೂಲಕ ಪುಸ್ತಕಗಳನ್ನು ಮುದ್ರಿಸಲು ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಿದ ಮುದ್ರಕರ, ಪ್ರಕಾಶಕರ ಅರ್ಜಿಗಳನ್ನು ಪರಿಶೀಲಿಸಿ ಪಠ್ಯ ಪುಸ್ತಕಗಳ ಸಿಡಿಯನ್ನು ಮುದ್ರಣಕ್ಕೆ ನೀಡಲಾಗಿದೆ.

ಪರಿಷ್ಕರಣೆ ಮಾಡದಿರುವುದರಿಂದ ಎನ್‍ಸಿಇಆರ್‍ಟಿಯು ಪದವಿಪೂರ್ವ ಶಿಕ್ಷಣ ಇಲಾಖೆಗೆ ಯಾವುದೇ ಪತ್ರ ಕೂಡ ಬರೆದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಾಗ ಯಾವುದೇ ಗೊಂದಲವಾಗದಂತೆ ಎಚ್ಚರ ವಹಿಸಲಾಗಿದೆ. ಈ ಮೊದಲಿನ ನ್ಯೂನತೆಗಳನ್ನು ಸರಿಪಡಿಸಲಾಗಿದ್ದು , ವಯೋಮಿತಿಗೆ ತಕ್ಕಂತೆ ಪಠ್ಯಗಳನ್ನು ಅಳವಡಿಸಲಾಗಿದೆ. ಯಾವುದೇ ತಪ್ಪು ತಿಳುವಳಿಕೆಗೆ ಅವಕಾಶ ನೀಡದಂತೆ ಪ್ರಾಥಮಿಕ ಪ್ರೌಢಶಾಲಾ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin