ನಮ್ಮ ಕ್ಯಾಂಟೀನ್ ಉಸ್ತುವಾರಿ ಯಾರಿಗೆ..! : ಸಿಎಂ ನಿರ್ಧಾರವೇ ಅಂತಿಮ

ಈ ಸುದ್ದಿಯನ್ನು ಶೇರ್ ಮಾಡಿ

Namma-Canteen

ಬೆಂಗಳೂರು, ಮಾ.21- ನಗರದ 198 ವಾರ್ಡ್‍ಗಳಲ್ಲೂ ಆರಂಭಿಸಲು ಉದ್ದೇಶಿಸಿರುವ ನಮ್ಮ ಕ್ಯಾಂಟೀನ್ ಉಸ್ತುವಾರಿಯನ್ನು ಯಾರಿಗೆ ವಹಿಸಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಲಿದ್ದಾರೆ.  ನಮ್ಮ ಕ್ಯಾಂಟೀನ್ ಯೋಜನೆ ಜಾರಿ ಕುರಿತಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ವಿಕಾಸಸೌಧದಲ್ಲಿಂದು ಪೂರ್ವ ಭಾವಿ ಸಭೆ ಕರೆದಿದ್ದರು. ಸಭೆಯಲ್ಲಿ ಮೇಯರ್ ಜಿ.ಪದ್ಮಾವತಿ, ಉಪ ಮೇಯರ್ ಆನಂದ್ ಸೇರಿದಂತೆ ನಗರದ ಹಲವು ಶಾಸಕರು, ಇಸ್ಕಾನ್‍ನವರು ಪಾಲ್ಗೊಂಡಿದ್ದರು.

ನಮ್ಮ ಕ್ಯಾಂಟೀನ್ ಯೋಜನೆ ಉಸ್ತುವಾರಿಯನ್ನು ಅಕ್ಷಯ ಪಾತ್ರೆ ಯೋಜನೆ ನಡೆಸುತ್ತಿರುವ ಇಸ್ಕಾನ್ ಸಂಸ್ಥೆಗೆ ನೀಡಬೇಕೆಂದು ಕೆಲವರು ಸಲಹೆ ನೀಡಿದ್ದರು. ಆದರೆ, ಕೆಲ ಶಾಸಕರು ಇಸ್ಕಾನ್ ಸಂಸ್ಥೆ ನೀಡುವ ಊಟದಲ್ಲಿ ಬೆಳ್ಳುಳ್ಳಿ-ಈರುಳ್ಳಿ ಇರುವುದಿಲ್ಲ ಹಾಗಾಗಿ ಜನ ಸಾಮಾನ್ಯರಿಗೆ ಒಗ್ಗಲ್ಲ. ಆ ಸಂಸ್ಥೆಗೆ ವಹಿಸಿದರೆ ಈ ಯೋಜನೆ ವಿಫಲ ಆಗುತ್ತೆ. ಆದ್ದರಿಂದ ಬೇರೆ ಸಂಸ್ಥೆಗೆ ವಹಿಸಿ ಎಂದು ಸಲಹೆ ನೀಡಿದರು. ಇಸ್ಕಾನ್‍ಗೆ ವಹಿಸಬೇಕೆ? ಬೇಡವೇ ಎಂಬ ಬಗ್ಗೆ ಪರ-ವಿರೋಧ ಚರ್ಚೆ ನಡೆದವು.

ಖಾದರ್ ಮಾತನಾಡಿ, ನಮ್ಮ ಕ್ಯಾಂಟೀನ್ ಉಸ್ತುವಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸುತ್ತಾರೆ. ಅದರ ಬಗ್ಗೆ ಚರ್ಚೆ ಬೇಡ. ಆದರೆ ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಬೇಕೆಂಬ ಬಗ್ಗೆ ಸಲಹೆ ನೀಡಿ ಎಂದು ಮನವಿ ಮಾಡಿದರು.  ಮೇಯರ್ ಜಿ.ಪದ್ಮಾವತಿ ಮಾತನಾಡಿ, ಊಟ ಶುಚಿ-ರುಚಿಯಿಂದ ಕೂಡಿರಬೇಕು. ಬೆಳಗಿನ ತಿಂಡಿ(5ರೂ.) 7 ಗಂಟೆಯಷ್ಟರಲ್ಲಿ ಸಿದ್ದವಾಗಬೇಕು. ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 7 ಗಂಟೆ (10ರೂ.) ನಂತರ ಭೋಜನ ವಿತರಿಸಬೇಕೆಂದು ಹೇಳಿದರು.

ಖಾದರ್ ಸ್ಪಂದಿಸಿ, ನಮ್ಮ ಕ್ಯಾಂಟೀನ್ ಎಲ್ಲಿ ಪ್ರಾರಂಭಿಸಬೇಕೆಂಬ ಬಗ್ಗೆ ಮೊದಲು ನಿಖರವಾದ ಸ್ಥಳ ಗುರುತಿಸಿ ನಂತರ ಹೋಟೆಲ್‍ನ ವಿನ್ಯಾಸ ಹಾಗೂ ಲೋಗೋ ಹೇಗಿರಬೇಕು ಎಂಬ ಬಗ್ಗೆ ಅಂತಿಮಗೊಳಿಸಿ. ಒಂದು ವಾರದಲ್ಲಿ ಮಾಹಿತಿ ಕೊಡಿ. ನೀವು ನೀಡುವ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇವೆ. ನಮ್ಮ ಕ್ಯಾಂಟೀನ್ ಯೋಜನೆಯನ್ನು ಯಶಸ್ವಿಗೊಳಿಸೋಣ. ಇದು ಸರ್ಕಾರದ ಜನಪ್ರಿಯ ಯೋಜನೆ. ಇದನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಎಲ್ಲರೂ ಸೇರಿ ಶ್ರಮಿಸಿ ಎಲ್ಲರಿಗೂ ಒಳಿತು ಮಾಡೋಣ ಎಂದರು.

ಎಲ್ಲ ರೂಪುರೇಷೆ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‍ಗೆ ನೀಡೋಣ. ನಂತರ ಅವರು ನಮ್ಮ ಕ್ಯಾಂಟೀನ್ ಉಸ್ತುವಾರಿಯನ್ನು ಯಾರಿಗೆ ವಹಿಸಬೇಕೆಂಬ ಬಗ್ಗೆ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin