ವಿಧಾನ ಪರಿಷತ್‍ನಲ್ಲೂ ಪ್ರತಿಧ್ವನಿಸಿದ ಗುಂಡ್ಲುಪೇಟೆ ಲಾಠಿಚಾರ್ಜ್ ಪ್ರಕರಣ , ತನಿಖೆಗೆ ಬಿಜೆಪಿ ಬಿಗಿಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Lathi-Charge--01

ಬೆಂಗಳೂರು, ಮಾ.21- ನಿನ್ನೆ ಗುಂಡ್ಲುಪೇಟೆಯಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಪ್ರಕರಣ ವಿಧಾನಪರಿಷತ್‍ನಲ್ಲೂ ಪ್ರತಿಧ್ವನಿಸಿತು. ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಲಾಠಿಚಾರ್ಜ್ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿತು.
ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ಅಲ್ಲಿನ ಪಿಎಸ್‍ಐ ಅವರನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕೂಡಲೇ ಅಮಾನತು ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರ ಮೂಲಕ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.   ಇದಕ್ಕೆ ಒಪ್ಪದ ಈಶ್ವರಪ್ಪ ಮತ್ತು ಅನೇಕ ಬಿಜೆಪಿ ಸದಸ್ಯರು ಲಾಠಿ ಚಾರ್ಜ್ ಮಾಡಿದ ವಿಡಿಯೋ ದೃಶ್ಯಾವಳಿಗಳಿವೆ. ಅವುಗಳನ್ನು ತರಿಸಿಕೊಂಡು ಪರಿಶೀಲಿಸಿ ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದರು.
ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸರ್ಕಾರದಿಂದ ಸ್ಪಷ್ಟನೆ ಹೇಳಲು ಅವಕಾಶ ಕಲ್ಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಲಾಠಿಚಾರ್ಜ್: ಚುನಾವಣಾ ಅಧಿಕಾರಿಗೆ ಬಿಜೆಪಿ ದೂರು : 

ಬೆಂಗಳೂರು, ಮಾ.21- ಗುಂಡ್ಲುಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಶಾಸಕ ಬಿ.ಎನ್.ವಿಜಯಕುಮಾರ್ ಒತ್ತಾಯಿಸಿದ್ದಾರೆ. ಚುನಾವಣಾ ಅಧಿಕಾರಿ ಅನಿಲ್‍ಕುಮಾರ್ ಝಾ ಅವರಿಗೆ ಲಾಠಿಚಾರ್ಜ್ ಕುರಿತಂತೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಪಕ್ಷದ ಅಭ್ಯರ್ಥಿ ಪಿ.ಎನ್.ನಿರಂಜನ್‍ಕುಮಾರ್ ಮನವಿ ಪತ್ರ ಸಲ್ಲಿಸಲು ಹೋಗಿದ್ದ ಸಮಯದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆ ಪಕ್ಷದ ಕಾರ್ಯಕರ್ತರು ದುರುದ್ದೇಶದಿಂದ ಬಂದಿದ್ದಾರೆ. ಗಲಾಟೆ ಮಾಡುವ ಮನಸ್ಸು ಇಟ್ಟುಕೊಂಡೇ ಬಂದಿದ್ದಾರೆ. ಹೀಗಾಗಿ ಗೊಂದಲ ಉಂಟಾಗಿ ಅಧಿಕಾರಿಗಳು ನಮ್ಮ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಲಾಠಿಚಾರ್ಜ್ ಮಾಡಿದ್ದಾರೆ ಎಂದು ದೂರಿದರು. ಈ ಉಪ ಚುನಾವಣೆಯಲ್ಲಿ ಮುಕ್ತ, ನ್ಯಾಯಸಮ್ಮತ ಮತದಾನ ನಡೆಯುತ್ತದೆ ಎಂಬ ನಂಬಿಕೆ ನಮಗಿಲ್ಲ. ಶತಾಯಗತಾಯ ಗೆಲ್ಲಲೇಬೇಕೆಂದು ಸರ್ಕಾರ ಕಸರತ್ತು ಮಾಡುತ್ತಿದೆ. ಅದಕ್ಕಾಗಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೂಡಲೇ ಕೆಲ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಲಾಠಿಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ವಿಜಯ್‍ಕುಮಾರ್ ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin