ಎಸ್.ಎಂ.ಕೃಷ್ಣರ ಪುತ್ರಿ ಶಾಂಭವಿ ರಾಜಕೀಯಕ್ಕೆ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Krishna-01

ಬೆಂಗಳೂರು,ಮಾ.23-ಬಿಜೆಪಿಗೆ ಸೇರ್ಪಡೆಯಾಗಿರುವ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಸಿದ್ದಾರ್ಥ ಸಕ್ರೀಯ ರಾಜಕಾರಣಕ್ಕೆ ಧುಮುಕಲಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಾಂಭವಿ ಸಿದ್ದಾರ್ಥ 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.   ತಮ್ಮ ಪುತ್ರಿಗೆ ಟಿಕೆಟ್ ನೀಡಬೇಕೆಂದು ಎಸ್.ಎಂ.ಕೃಷ್ಣ ಕೇಂದ್ರ ವರಿಷ್ಠರ ಮುಂದೆ ಬೇಡಿಕೆ ಇಟ್ಟಿಲ್ಲ. ಆದರೆ ಅವರ ಪುತ್ರಿಗೆ ಟಿಕೆಟ್ ನೀಡಿದರೆ ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದಲ್ಲಿ ಆನೆ ಬಲ ಬರುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.
ಬೆಂಗಳೂರಿನ ಜನತೆ ಈಗಲೂ ಕೂಡ ಕೃಷ್ಣ ಅವರ ನಾಯಕತ್ವದ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ. ಅವರ ಸೇವೆಯನ್ನು ಬಳಸಿಕೊಂಡರೆ ಹೆಚ್ಚಿನ ಲಾಭವಾಗುತ್ತದೆ ಎಂಬ ದೂರದೃಷ್ಟಿ ಕಮಲ ನಾಯಕರಲ್ಲಿದೆ.

ಈ ಹಿಂದೆ ಶಾಂಭವಿ ಸಿದ್ದಾರ್ಥ ಪಕ್ಷದ ಪರ ಪ್ರಚಾರ ನಡೆಸಿದರಾದರೂ ಚುನಾವಣಾ ಅಖಾಡಕ್ಕೆ ಧುಮುಕಿರಲಿಲ್ಲ. ಇದೀಗ ಅವರನ್ನು ಬಿಜೆಪಿ ಹುರಿಯಾಳಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಸುವ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ತಮ್ಮ ಪುತ್ರಿ ರಾಜಕಾರಣಕ್ಕೆ ಬರುವುದಾದರೆ ಅಭ್ಯಂತರವಿಲ್ಲ. ನಾನು ಯಾರ ಪರವಾಗಿಯೂ ವಕಾಲತು ವಹಿಸುವುದಿಲ್ಲ ಎಂದು ಎಸ್.ಎಂ.ಕೃಷ್ಣ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಅಳಿಯ ಸಿದ್ದಾರ್ಥ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡುವುದನ್ನಾಗಲಿ, ಕುಟುಂಬದ ವರ್ಗದವರಿಗೆ ಟಿಕೆಟ್ ನೀಡಬೇಕೆಂದು ನಾನು ಲಾಬಿ ಮಾಡುವುದಿಲ್ಲ. ಪಕ್ಷದ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತೇನೆ ಎಂದು ಬಿಜೆಪಿ ಕೇಂದ್ರ ವರಿಷ್ಠರ ಮುಂದೆ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ.   ಈ ಹಿಂದೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಹಾಗೂ ಚಲನಚಿತ್ರ ನಟ ಎಂ.ಎಚ್.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ನೀಡುವ ಲೆಕ್ಕಾಚಾರ ಹಾಕಲಾಗಿತ್ತು.

ಪಕ್ಷ ಸೇರ್ಪಡೆ ಕುರಿತಂತೆ ಸುಮಲತಾ ಅವರನ್ನು ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಶಾಂಭವಿ ಸಿದ್ದಾರ್ಥ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ನಿರ್ಣಯಕ್ಕೆ ಬಿಜೆಪಿ ಬಂದಿದೆ.   ಕೃಷ್ಣ ಅವರ ಸೇವೆಯನ್ನು ಬಳಸಿಕೊಂಡು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿರುವ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಮನವಿ ಮಾಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin