ನಂಜನಗೂಡು- ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೃಷ್ಣ ಪ್ರಚಾರ ಮಾಡ್ತಾರೆ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

Ashok--01

ಬೆಂಗಳೂರು, ಮಾ. 23-ನಲವತ್ತಾರು ವರ್ಷಗಳ ಕಾಂಗ್ರೆಸ್ ಪಕ್ಷದ ಸಂಪರ್ಕ ಕಳೆದುಕೊಂಡು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು.  ಯಡಿಯೂರು ಕೆರೆಯಲ್ಲಿ ಹಮ್ಮಿಕೊಂಡಿದ್ದ ಬಾನಾಡಿಗಳೇ ಮರಳಿ ಬನ್ನಿ ಗೂಡಿಗೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡ ಎಸ್.ಎಂ.ಕೃಷ್ಣ ಅವರು ನಾಳೆ ಸಂಜೆ 5.30ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅವರನ್ನು ಅಲ್ಲಿಂದ ಮೆರವಣಿಗೆಯಲ್ಲಿ ಕರೆತರಬೇಕೆಂದಿದ್ದೆವು. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುವುದರಿಂದ ಮೆರವಣಿಗೆ ಬೇಡ ಎಂದು ಅವರೇ ಸಲಹೆ ನೀಡಿದ್ದರು. ಹಾಗಾಗಿ ನೇರವಾಗಿ ಪಕ್ಷದ ಕಚೇರಿಗೆ ಕೃಷ್ಣ ಆಗಮಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣ ಅವರೊಂದಿಗೆ ಮಾತನಾಡಿ, ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಇನ್ನೂ ಪ್ರಚಾರದ ದಿನಾಂಕ ನಿಗದಿಪಡಿಸಬೇಕಿದೆ ಎಂದು ಹೇಳಿದರು.

ಉಮಾಶ್ರೀ ಹಠಮಾರಿತನ:

ಅಂಗನವಾಡಿ ಕಾರ್ಯಕರ್ತೆಯರ ಹೋರಾಟ 4ನೆ ದಿನಕ್ಕೆ ಮುಂದುವರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರ ಹಠಮಾರಿತನ ಹಾಗೂ ಸರ್ಕಾರದ ಮೊಂಡುತನವೇ ಕಾರಣ ಎಂದು ಇದೇ ವೇಳೆ ಅಶೋಕ್ ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ನಿಜಕ್ಕೂ ಸರ್ಕಾರಕ್ಕೆ ಕಪ್ಪು ಚುಕ್ಕೆ ಇಟ್ಟಂತೆ. ಈಗಲೂ ಕಾಲವಿ ುಂಚಿಲ್ಲ. ತಕ್ಷಣ ಎಚ್ಚೆತ್ತುಕೊಂಡು ಹೋರಾಟ ನಿರತ ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಅವರೇ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಅತ್ಯುತ್ತಮ ಕಾರ್ಯಕ್ರಮ:

ಬಾನಾಡಿಗಳೇ ಮರಳಿ ಬನ್ನಿ ಗೂಡಿಗೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ವಾಯುಮಾಲಿನ್ಯದಿಂದ ಗುಬ್ಬಚ್ಚಿಗಳು ಸೇರಿದಂತೆ ಇತರ ಪುಟ್ಟ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಎನ್.ಆರ್.ರಮೇಶ್ ಅವರು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಎಲ್ಲೆಲ್ಲಿ ಕೆರೆಗಳಿವೆಯೋ ಅಲ್ಲಿ ಕೂಡ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದರೆ ಪ್ರಾಣಿ-ಪಕ್ಷಿಗಳು ಅಳಿವಿನಂಚಿಗೆ ಹೋಗುವುದನ್ನು ತಪ್ಪಿಸಬಹುದು ಎಂದು ಅಶೋಕ್ ಹೇಳಿದರು.  ಮೇಯರ್ ಜಿ.ಪದ್ಮಾವತಿ ಮಾತನಾಡಿ, ಕಣ್ಮರೆಯಾಗುತ್ತಿರುವ ಪ್ರಾಣಿ-ಪಕ್ಷಿಗಳನ್ನು ಉಳಿಸಲು ಎನ್.ಆರ್.ರಮೇಶ್ ಉತ್ತಮ ಕಾರ್ಯ ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ನಗರದ 198 ವಾರ್ಡ್‍ಗಳಲ್ಲೂ ಇಂತಹ ಕಾರ್ಯ ಮಾಡಿದರೆ ಒಳಿತು. ಮುಂದಿನ ಬಜೆಟ್‍ನಲ್ಲಿ ಕೆರೆಗಳನ್ನು ಸಂರಕ್ಷಿಸಲು ಅನುದಾನ ಮೀಸಲಿಡಲಾಗುವುದು ಎಂದು ಮೇಯರ್ ಭರವಸೆ ನೀಡಿದರು.  ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್, ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ನಟಿ ಸಂಯುಕ್ತಾ ಹೊರನಾಡು ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin