ಶಾಸಕರ ಗನ್ ಮ್ಯಾನ್ ಬಳಿಯಿದ್ದ ಸರ್ವೀಸ್ ಪಿಸ್ತೂಲ್ ದೋಚಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Gun-Recovery

ಬೆಂಗಳೂರು,ಮಾ.23– ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಗನ್‍ಮ್ಯಾನ್ ಬಳಿಯಿದ್ದ ಸರ್ವೀಸ್ ಪಿಸ್ತೂಲ್ ದೋಚಿದ್ದ ಇಬ್ಬರನ್ನು ವಿಶೇಷ ತಂಡದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.   ಸೂರತ್ಕಲ್‍ನ ಧನುಷ್(19) ಮತ್ತು ವಿಜಯ್ ಅಲಿಯಾಸ್ ಆಂಜನೇಯ(21) ಬಂಧಿತ ಆರೋಪಿಗಳು.   ಧನುಷ್ ಮಂಗಳೂರಿನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರೆ ವಿಜಯ್ ಐಸ್‍ಕ್ರೀಂ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೋಜಿನ ಜೀವನಕ್ಕಾಗಿ ಇಬ್ಬರು ಮೊಬೈಲ್ ಕಳವು ಮಾಡುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿಳ್ಳ ಮುನಿಸ್ವಾಮಪ್ಪ ಅವರು ಫೆ.24ರಂದು ಬೆಳಗ್ಗೆ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ರಾಜೀನಾಮೆ ಹಿಂಪಡೆದು ಸಂಜೆಯವರೆಗೂ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿದ್ದರು.   ರಾತ್ರಿ ವಿಶ್ರಾಂತಿಗೆಂದು ಕಮ್ಮಗೊಂಡನಹಳ್ಳಿಯ ಹನುಮರೆಡ್ಡಿ ಎಂಬುವರ ತೋಟದ ಮನೆಗೆ ತೆರಳಿದ್ದು , ಅಲ್ಲಿ ಗನ್‍ಮ್ಯಾನ್ ನರಸಿಂಹಮೂರ್ತಿ ಅವರಿಗೆ ಮನೆಗೆ ತೆರಳುವಂತೆ ಹೇಳಿದ್ದಾರೆ .   ರಾತ್ರಿ 11 ಗಂಟೆಯಲ್ಲಿ ಆಟೋದಲ್ಲಿ ಯಲಹಂಕ ಉಪನಗರದಲ್ಲಿನ ಮನೆಗೆ ಬರುವಾಗ ಯಲಹಂಕ ಉಪನಗರದ 4ನೇ ಹಂತದಲ್ಲಿರುವ ತಿರುಮಲ ಡಾಬಾ ಹತ್ತಿರ ಮೂತ್ರ ವಿಸರ್ಜನೆಗೆಂದು ಆಟೋದಿಂದ ಇಳಿದಿದ್ದಾರೆ.

ಈ ವೇಳೆ ರಸ್ತೆಬದಿ ಕುಸಿದು ಬಿದ್ದಿದ್ದಾರೆ. ಇದರಿಂದ ಹೆದರಿದ ಆಟೋ ಚಾಲಕ ಸ್ಥಳದಿಂದ ಹೊರಟುಹೋಗಿದ್ದಾನೆ. ಮರುದಿನ ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಎಚ್ಚರಗೊಂಡು ನೋಡಿಕೊಂಡಾಗ ನರಸಿಂಹಮೂರ್ತಿ ಅವರ ಬಳಿಯಿದ್ದ 6 ಸಾವಿರ ರೂ. ಇದ್ದ ಪರ್ಸ್, ಮೊಬೈಲ್, ಸರ್ವೀಸ್ ಪಿಸ್ತೂಲ್ ಕಾಣೆಯಾಗಿದೆ. ಈ ಬಗ್ಗೆ ಯಲಹಂಕ ಉಪನಗರ ಠಾಣೆಗೆ ದೂರು ನೀಡಿದ್ದರು.   ಆರೋಪಿಗಳ ಪತ್ತೆಗೆ ವಿಶೇಷ ತಂಡವೊಂದು ಕಾರ್ಯಾಚರಣೆ ನಡೆಸಿದ್ದು, ಮಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಂಬಾಳ್ಕರ್ ವಿವರಿಸಿದರು.

ಆರೋಪಿಗಳಿಬ್ಬರು ಬೈಕ್‍ನಲ್ಲಿ ಫೆ.24ರಂದು ಬೆಂಗಳೂರಿಗೆ ಬಂದಿದ್ದು , ಯಶವಂತಪುರದಲ್ಲಿ ಲಾಡ್ಜ್ ಮಾಡಿದ್ದಾರೆ. ರಾತ್ರಿ ದರೋಡೆಗೆ ಹೊಂಚು ಹಾಕಿ ನಗರದಲ್ಲಿ ಸುತ್ತಾಡುವಾಗ ತಿರುಮಲ ಡಾಬಾ ಬಳಿ ಬಿದ್ದಿದ್ದ ಗನ್‍ಮ್ಯಾನ್ ಕಂಡು ಆತನ ಬಳಿಯಿದ್ದ ಪರ್ಸ್, ಮೊಬೈಲ್, ಸರ್ವೀಸ್ ಪಿಸ್ತೂಲ್ ದೋಚಿದ್ದಾರೆ.
ವಾಪಸ್ ಲಾಡ್ಜ್‍ಗೆ ಬರಲು ದಾರಿ ತಿಳಿಯದೆ ಗೂಗಲ್‍ನಲ್ಲಿ ರೂಟ್ ಮ್ಯಾಪ್ ಹಾಕಿಕೊಂಡು ರೂಮ್ ಸೇರಿ ಮರುದಿನ ಬೆಳಗ್ಗೆ ವಾಪಸ್ ಮಂಗಳೂರಿಗೆ ಹೋಗಿದ್ದಾರೆ.

ಕದ್ದ ಮೊಬೈಲ್, ಹಣವನ್ನು ಹಂಚಿಕೊಂಡು ಪಿಸ್ತೂಲನ್ನು ಇಬ್ಬರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.   ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ತಂಡ ಮಂಗಳೂರಿಗೆ ತೆರಳಿ ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾಗ ಕದ್ದ ಮಾಲು ಮಾರಲು ಯತ್ನಿಸುತ್ತಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.   ವಿಚಾರಣೆ ವೇಳೆ ಎಎಚ್‍ಸಿ ನರಸಿಂಹಮೂರ್ತಿ ಅವರ ಪರ್ಸ್, ಮೊಬೈಲ್, ಸರ್ವೀಸ್ ಪಿಸ್ತೂಲ್ ಕದ್ದಿರುವುದು ಬೆಳಕಿಗೆ ಬಂದಿದೆ ಎಂದು ನಿಂಬಾಳ್ಕರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಡಾ.ಹರ್ಷ, ವಿಶೇಷ ತಂಡದ ಇನ್‍ಸ್ಪೆಕ್ಟರ್ ವಿ.ಎಸ್.ಶಿವಕುಮಾರ್, ಎಎಸ್‍ಐ ಪರಮೇಶ್ವರ್ ಉಪಾಧ್ಯಾಯ, ಕಾನ್‍ಸ್ಟೆಬಲ್‍ಗಳಾದ ಆನಂದ್, ಸದಾಶಿವ ಕಾಂಬ್ಲೆ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin