ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾ, ಪೋಸ್ಟ್ ಮಾಡುವ ಮುನ್ನ ಹುಷಾರ್

ಈ ಸುದ್ದಿಯನ್ನು ಶೇರ್ ಮಾಡಿ

Social-Media

ಬೆಂಗಳೂರು, ಮಾ.23- ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮತ್ತು ಕೆಟ್ಟದಾಗಿ ಬರೆಯುವ ಪ್ರಕರಣಗಳ ಬಗ್ಗೆ ನಿಗಾ ಇಡಲು ಎಲ್ಲಾ ಜಿಲ್ಲೆಯಲ್ಲೂ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಆಂಡ್ ಟೆಕ್ನಿಕಲ್ ಸೆಲ್ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದ್ದಾರೆ.  ಬಿಜೆಪಿ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣವನ್ನು ಜನರು ಬಳಸುತ್ತಿದ್ದಾರೆ. ತಂತ್ರಜ್ಞಾನದಿಂದ ಒಳ್ಳೆಯದೂ ಇದೆ ಅದೇ ಮಾದರಿಯಲ್ಲಿ ಕೆಟ್ಟದ್ದಕ್ಕೂ ಜನರು ಬಳಸುತ್ತಿದ್ದಾರೆ.

ಅವಹೇಳನಕಾರಿಯಾಗಿ ಚಿತ್ರವನ್ನು ರಚಿಸಿ ಅದನ್ನು ಅಪ್‍ಲೋಡ್ ಮಾಡುವುದು. ಕೆಟ್ಟ ಸಂದೇಶ ಹಾಕುವುದು ಮುಂತಾದ ಘಟನೆಗಳು ನಡೆಯುತ್ತಿವೆ. ಇದರ ಮೇಲೆ ನಿಗಾ ಇಡಲು ಬೆಂಗಳೂರು, ಮಂಗಳೂರು ಸೇರಿದಂತೆ ಕಮಿಷನರ್ ವ್ಯಾಪ್ತಿಯಲ್ಲಿ ಈ ನಿಗಾ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಈ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಈ ಘಟಕದ ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕಾನೂನು ರೂಪಿಸಬೇಕಾಗಿದೆ. ಈ ಬಗ್ಗೆ ಹೊಸ ಕಾನೂನು ರಚಿಸಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಯನ್ನು ಅವಹೇಳನ ಮಾಡುತ್ತಿರುವ ಪ್ರಕರಣ ಪ್ರಪಂಚದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಕಳೆದ ವಾರ ಲಂಡನ್‍ನಲ್ಲಿ ನಡೆದ ಸೈಬರ್ ಸಮಾವೇಶದಲ್ಲಿ ತಾವು ಭಾಗವಹಿಸಿದ್ದು, ಅಲ್ಲಿಯೂ ಈ ಸಮಸ್ಯೆಯ ಬಗ್ಗೆ ವ್ಯಾಪಕ ಚರ್ಚೆ ಆಗಿದೆ ಎಂದು ಹೇಳಿದ ಅವರು, ಸಿಐಡಿಯಲ್ಲಿ ಈಗಾಗಲೇ ಒಂದು ಸೈಬರ್ ಸೆಲ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.  ನಿಗಾ ಘಟಕದಲ್ಲಿ ಒಬ್ಬ ಡಿಎಸ್‍ಪಿ, ಒಬ್ಬರು ಪಿಐ, ಒಬ್ಬರು ಪಿಎಸ್‍ಐ, ಎಎಸ್‍ಐ ಮತ್ತು ಐದು ಜನ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಇರುವ ಕಾನೂನು ಜೊತೆಗೆ ಹೊಸ ಕಾನೂನು ಅಳವಡಿಸಿಕೊಂಡು ಸಾಮಾಜಿಕ ಜಾಲ ತಾಣದ ಮೇಲೆ ನಿಗಾ ವಹಿಸುವುದಾಗಿ ಅವರು ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin