ಹಕ್ಕುಚ್ಯುತಿ ಮಂಡಿಸಿ ಎಂದು ಸವಾಲು ಹಾಕಿ ಇಕ್ಕಟ್ಟಿಗೆ ಸಿಲುಕಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Session--01

ಬೆಂಗಳೂರು, ಮಾ. 23-ಅಂಗನವಾಡಿ ಕಾರ್ಯಕರ್ತೆಯರಿಗೆ ನಮ್ಮ ಸರ್ಕಾರ ಮಾತ್ರ ಗೌರವಧನ ಹೆಚ್ಚಳ ಮಾಡಿದೆ. ಬಿಜೆಪಿ ಕಾಲದಲ್ಲಿ ಹೆಚ್ಚಳವಾಗಿಲ್ಲ ಎಂದು ಆರೋಪಿಸಿ ತಮ್ಮ ಹೇಳಿಕೆ ತಪ್ಪಾಗಿದ್ದರೆ ಹಕ್ಕುಚ್ಯುತಿ ಮಂಡಿಸಿ ಎಂದು ಸವಾಲು ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಕ್ಕಟ್ಟಿಗೆ ಸಿಲುಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಇಂದು ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿತ್ತು. ಅದಕ್ಕೆ ಬಲವಾದ ಸಮರ್ಥನೆ ನೀಡಿ ಹಕ್ಕುಚ್ಯುತಿ ನಿರ್ಣಯವನ್ನು ಬದಿಗೆ ಸರಿಸಲು ಸ್ಪೀಕರ್ ಅವರು ಪ್ರಯತ್ನ ಮಾಡಿದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಅವರೇ ಬಿಜೆಪಿ ಶಾಸಕರ ನೆರವಿಗೆ ಬಂದರು.

ಹಕ್ಕುಚ್ಯುತಿ ಮಂಡಿಸಲಾಗಿದೆ. ಅವರು ಏನು ಹೇಳೂತ್ತಾರೋ ಅದನ್ನು ಕೇಳೋಣ. ಸರ್ಕಾರ ತನ್ನ ವಾದವನ್ನು ಹೇಳಲಿ. ನಂತರ ಹಕ್ಕುಚ್ಯುತಿ ಅಂಗೀಕರಿಸಬೇಕೇ ಬೇಡವೇ ಎಂಬ ನಿರ್ಣಯ ತೆಗೆದುಕೊಳ್ಳಲು ಸ್ಪೀಕರ್ ಸ್ವತಂತ್ರರಿದ್ದಾರೆ ಎಂದು ರಮೇಶ್‍ಕುಮಾರ್ ಹೇಳಿದರು. ಕೊನೆಗೆ ಪ್ರತಿಪಕ್ಷದ ಶಾಸಕರಿಗೆ ಸ್ಪೀಕರ್ ಆರಂಭಿಕ ವಾದಕ್ಕೆ ಅವಕಾಶ ಮಾಡಿಕೊಟ್ಟರು.  ಕಳೆದ ಮೂರು ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ ಆರಂಭವಾದಾಗ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ಆರಂಭವಾಯಿತು. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಪ್ರತಿವರ್ಷ 500ರೂ.ಗಳಂತೆ ಅಂಗನವಾಡಿ ನೌಕರರಿಗೆ ಗೌರವ ಧನ ಹೆಚ್ಚಿಸಿದೆ. ಬಿಜೆಪಿ ಯಾವುದೇ ಗೌರವ ಧನ ಹೆಚ್ಚಿಸಿಲ್ಲ. ಬಾಯಿಗೆ ಮಾತಿಗೆ ಮಹಿಳೆಯರ ಪರ ಮಾತನಾಡುವ ಬಿಜೆಪಿಗೆ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ವಾದವನ್ನು ಸುಳ್ಳು ಎಂದಾಗ ಬೇಕಿದ್ದರೆ ನನ್ನ ಮೇಲೆ ಹಕ್ಕು ಚ್ಯುತಿ ಮಂಡಿಸಿ ಎಂದು ಸಿಎಂ ಸವಾಲು ಹಾಕಿದರು.  ಅದೇ ವಿಷಯವನ್ನು ಪಟ್ಟು ಹಿಡಿದಿರುವ ಬಿಜೆಪಿ ಇಂದು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿತು.  ಕಲಾಪ ಆರಂಭದಲ್ಲೇ ಜಗದೀಶ್ ಶೆಟ್ಟರ್ ಹಕ್ಕುಚ್ಯುತಿ ನಿರ್ಣಯ ಮಂಡಿಸಿ, ಮುಖ್ಯಮಂತ್ರಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದರಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ಅವರ ವಿರುದ್ಧ ನಿರ್ಣಯ ಮಂಡಿಸಲು ಮತ್ತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.  ಈ ಹಂತದಲ್ಲಿ ಸಭಾಧ್ಯಕ್ಷರು ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯಿಂದ ಮುಖ್ಯಮಂತ್ರಿ ಆ ರೀತಿ ಹೇಳಿದ್ದಾರೆ. ನಂತರ ಮಾಹಿತಿ ಪಡೆದು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡಿದ್ದಾರೆ ಎಂದರು.

ಶೆಟ್ಟರ್ ಹಕ್ಕುಚ್ಯುತಿ ನಿರ್ಣಯ ಚರ್ಚೆಗೆ ಅವಕಾಶ ನೀಡಬೇಕೆಂದು ಹೇಳಿದಾಗ ಅದನ್ನು ಪರಿಶೀಳಿಸುವುದಾಗಿ ಹೇಳಿ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು.
ಪ್ರಶ್ನೋತ್ತರ ಅವಧಿ ನಂತರ ಮತ್ತೆ ಜಗದೀಶ್ ಶೆಟ್ಟರ್ ಹಕ್ಕುಚ್ಯುತಿ ಪ್ರಸ್ತಾಪಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು, 1957ರ ಜುಲೈ 24 ರಂದು ಆಗಿನ ಸಚಿವ ಕಂಠಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿತ್ತು. 1997ರ ಜನವರಿ 31 ರಂದು ಶಾಸಕ ಎಚ್.ಎನ್.ನಂಜೇಗೌಡ ಅವರು ಸಚಿವ ವೀರೇಂದ್ರ ಪಾಟೀಲ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು.

ಈ ಎರಡೂ ಪ್ರಕರಣಗಳಲ್ಲಿ ಸಚಿವರು ಬಾಯಿ ತಪ್ಪಿ ಹೇಳುವ ಹೇಳಿಕೆಗಳು ಮತ್ತು ದುರುದ್ದೇಶಪೂರಿತವಲ್ಲದ ಮಾಹಿತಿಗಳು ಹಕ್ಕುಚ್ಯುತಿಗೆ ಬರುವುದಿಲ್ಲ. ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರೆ ಅದನ್ನು ಹಕ್ಕುಚ್ಯುತಿ ಎಂದು ಪರಿಗಣಿಸಬಾರದು ಎಂದು ತೀರ್ಪು ಹೊರಬಂದಿದೆ ಎಂದರು.  ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಶೆಟ್ಟರ್, ಸ್ಪೀಕರ್ ಅವರು ನಮ್ಮ ವಾದ ಕೇಳದೆ ರೂಲಿಂಗ್ ನೀಡಬಾರದು ಎಂದು ಆಖ್ಷೇಪ ವ್ಯಕ್ತಪಡಿಸಿದರು.  ಬಿಜೆಪಿ ಎಲ್ಲಾ ಶಾಸಕರು ಶೆಟ್ಟರ್ ಅವರ ಬೆಂಬಲಕ್ಕೆ ಎದ್ದು ನಿಂತು ಗದ್ದಲ ಆರಂಭಿಸಿದರು. ಮಧ್ಯಪ್ರವೇಶಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್, ಹಕ್ಕುಚ್ಯುತಿ ವಿಷಯದಲ್ಲಿ ಪಕ್ಷ, ಪಂಗಡ ಎಂಬ ಭದಭಾವ ಬೇಡ. ಸೂಚನೆ ಕಳುಹಿಸಿರುವ ಬಿಜೆಪಿಯವರು ತಮ್ಮ ವಾದ ಮಂಡಿಸಿರಿ. ನಂತರ ಸರ್ಕಾರ ಉತ್ತರ ನೀಡಿ ಅಂತಿಮವಾಗಿ ಸ್ಪೀಕರ್ ಅವರು ತಮ್ಮ ತೀರ್ಪು ನೀಡಲಿ ಎಂದು ಮನವಿ ಮಾಡಿದರು.

ಅದನ್ನು ಆಧರಿಸಿ ಕೋಳಿವಾಡ ಅವರು ಪ್ರಾಥಮಿಕ ವಾದಕ್ಕೆ ಅವಕಾಶ ನೀಡಿದರು. ಈ ನಡುವೆ ನಮ್ಮಂತಹ ಕಿರಿಯರು ಬಾಯಿ ತಪ್ಪಿ ಆಡುವ ಮಾತಿಗೆ ಕ್ಷಮೆ ಇದೆ. 40 ವರ್ಷ ಸಾರ್ವಜನಿಕ ಜೀವನದಲ್ಲಿರುವ ಹಿರಿಯರು ಬಾಯಿ ತಪ್ಪಿ ಆಡುವ ಮಾತುಗಳಿಗೆ ಕ್ಷಮೆ ಇಲ್ಲ. ಬೆಳ್ಳಗಾಗಿರುವ ಗಡ್ಡಕ್ಕೆ ಹೇರ್‍ಡೈ ಹಾಕಿಕೊಂಡು ನಾನು ಕಿರಿಯ ಎಂದು ಹೇಳಿಕೊಳ್ಳುವುದೇಕೆ ಎಂದು ಸಚಿವ ರಮೇಶ್‍ಕುಮಾರ್ ಸಿ.ಟಿ.ರವಿ ಅವರನ್ನು ಕಿಚಾಯಿಸಿದರು.  ಏನೇ ಆದರೂ ಎಲ್ಲದರಲ್ಲೂ ನಿಮ್ಮಷ್ಟು ಅನುಭವ ನಮಗಿಲ್ಲ ಎಂದು ಸಿ.ಟಿ.ರವಿ, ರಮೇಶ್ ಕುಮಾರ್ ಅವರನ್ನು ಕಾಲೆಳೆದರು.

ಹಕ್ಕುಚ್ಯುತಿ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ತಮ್ಮ ಸರ್ಕಾರ 2007-08ರಿಂದ 2012-13ರವರೆಗೆ ಹಂತಹಂತವಾಗಿ ಏರಿಕೆ ಮಾಡಿರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳದ ಮಾಹಿತಿಯನ್ನು ನೀಡಿದರು.
ಸಿ.ಟಿ.ರವಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅದನ್ನು ಮುಚ್ಚಿಟ್ಟು ಮುಖ್ಯಮಂತ್ರಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಂಡಿದ್ದಾರೆ.ಸದನಕ್ಕೆ ತಪ್ಪು ಮಾಹಿತಿ ನೀಡಿರುವ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin