ಜಾತ್ಯತೀತತೆಯ ಮೇಲೆ ನನಗೆ ನಂಬಿಕೆ ಹೋಗಿದೆ : ಎಸ್.ಎಂ.ಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

Krishna-01

ನವದೆಹಲಿ, ಮಾ.24– ವೋಟಿಗಾಗಿ ನಾವೇ ಸೃಷ್ಟಿಸಿಕೊಂಡಿರುವ ಜಾತ್ಯತೀತತೆಯ ಸೋಗಿನ ಮೇಲೆ ನನಗೆ ನಂಬಿಕೆ ಹೋಗಿದೆ. ಅಲ್ಲದೆ ಬಿಜೆಪಿ ಕೂಡ ಜಾತ್ಯತೀತ ಪಕ್ಷ. ನರೇಂದ್ರ ಮೋದಿ ಕೂಡ ಜಾತ್ಯತೀತ ವ್ಯಕ್ತಿ ಎಂದು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಮರ್ಥಿಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಬಿಜೆಪಿ ಸೇರಿದ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದು, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.  ಜಾತ್ಯತೀತತೆ ಎಂಬ ಕ್ಲೀಷೆಯ ಬಗ್ಗೆ ನನಗೆ ನಂಬಿಕೆ ಹೋಗಿದೆ. ಮತದಾರರನ್ನು ಸೆಳೆಯಲು ನಾವು ಜಾತ್ಯತೀತತೆ ಎಂಬ ಅಸ್ತ್ರವನ್ನು ಬಳಸುತ್ತಿದ್ದೇವೆ. ಎಲ್ಲಾ ಪಕ್ಷಗಳು ಜಾತ್ಯತೀತವಾಗಿಯೇ ಇವೆ. ಎಲ್ಲಾ ಸಮುದಾಯಗಳ ಮತಗಳನ್ನು ಕೇಳಬೇಕಿರುವುದರಿಂದ ಒಂದೇ ಜಾತಿಯ ರಾಜಕಾರಣ ಮಾಡಲು ಸಾಧ್ಯವಿಲ್ಲ.

ಬಿಜೆಪಿ ಮೇಲಿರುವ ಅವಪಾವದಕ್ಕೆ ಇತ್ತೀಚೆಗೆ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉತ್ತರ ಸಿಕ್ಕಿದೆ. ಅಲ್ಲಿ ಜನ ಸಾಮಾನ್ಯರು ಭರ್ಜರಿ ಬಹುಮತ ನೀಡಿ ವಿಶೇಷ ತೀರ್ಪು ನೀಡಿದ್ದಾರೆ ಎಂದರು.  ಹಿರಿತ ಮತ್ತು ವಯಸ್ಸಿನಲ್ಲಿ ಎಸ್.ಎಂ.ಕೃಷ್ಣರ ಅರ್ಧದಷ್ಟು ಇಲ್ಲದ ನರೇಂದ್ರ ಮೋದಿ ಅವರ ಕೆಳಗೆ ಕೆಲಸ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಲೇವಡಿಗೆ ಪ್ರತಿಕ್ರಿಯಿಸಿರುವ ಕೃಷ್ಣ ಅವರು, ಕಾಂಗ್ರೆಸ್‍ನಲ್ಲೇ ಉಳಿದಿದ್ದರೆ ನನ್ನ ವಯಸ್ಸಿನಲ್ಲಿ ಅರ್ಧಭಾಗದಷ್ಟೂ ಇಲ್ಲದ ರಾಹುಲ್‍ಗಾಂಧಿ ಜತೆ ಕೆಲಸ ಮಾಡಬೇಕಿತ್ತಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಸಕ್ರಿಯ ರಾಜಕಾರಣಿ ಎಂದರೆ ಎಂಎಲ್‍ಎ, ಎಂಪಿ, ಎಂಎಲ್‍ಸಿ ಆಗಬೇಕೆಂದೇನೂ ಇಲ್ಲ. ರಾಜಕೀಯ ಬೆಳವಣಿಗೆಗೆ ತಮ್ಮ ಇತಿಮಿತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತೇನೆ. ನಾನು ನೋಡಿದ ಕಾಂಗ್ರೆಸ್ ಈಗ ಉಳಿದಿಲ್ಲ. ಹಾಗಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ನನಗೆ ಯಾವುದೇ ಹಿಂಸೆ ಆಗುವುದಿಲ್ಲ.  ನನ್ನ ವಯಸ್ಸಿಗೆ ಬೆಲೆ ಸಿಗದ ಕಡೆ ಇರಲು ಮನಸ್ಸಾಗಲಿಲ್ಲ. ನಾನೀಗಲೂ ದೈಹಿಕ ಹಾಗೂ ಮಾನಸಿಕವಾಗಿ ಟೆನ್ನಿಸ್ ಆಡುವಷ್ಟು ಫಿಟ್ ಆಗಿದ್ದೇನೆ ಎಂದು ಎಸ್.ಎಂ.ಕೃಷ್ಣ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin