ನಾಳೆ 13ಸಾವಿರ ಕೋಟಿ ಬಿಬಿಎಂಪಿ ಭಾರೀ ಬಜೆಟ್, ಎಲೆಕ್ಷನ್ ಟಾರ್ಗೆಟ್

ಈ ಸುದ್ದಿಯನ್ನು ಶೇರ್ ಮಾಡಿ

bbmp

ಬೆಂಗಳೂರು, ಮಾ.24- ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು, ಹಿಂದುಳಿದ ವರ್ಗದವರನ್ನು ಸೆಳೆಯಲು ನಾಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆ ಆಗಲಿದೆ. ಇದುವರೆಗೆ 13ಸಾವಿರ ಕೋಟಿ ಭಾರೀ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಯಾವುದೇ ಕಾರಣಕ್ಕೂ ವಿರೋಧಪಕ್ಷದವರ ಟೀಕೆಗೆ ಗುರಿಯಾಗಬಾರದೆಂದು ನಿರ್ಧರಿಸಿರುವ ಆಡಳಿತ ಪಕ್ಷ 10ಸಾವಿರ ಕೋಟಿ ರೂ. ಒಳಗೆ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

ಕಂದಾಯ ನಿವೇಶನಗಳಿಗೆ ಎ-ಖಾತ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದ್ದು, ಇದೂ ಕೂಡ ನಾಳಿನ ಬಜೆಟ್‍ನಲ್ಲಿ ಘೋಷಣೆಯಾದರೆ ಅಚ್ಚರಿಯಿಲ್ಲ.
ಹಿಂದಿನ ಅಧ್ಯಕ್ಷ ಶಿವರಾಜ್ ಮಂಡಿಸಿದ್ದ ಬಾನಾಡಿಗಳೇ ಮರಳಿ ಬನ್ನಿ ಗೂಡಿಗೆ, ಬಸ್ ತಂಗುದಾಣದಲ್ಲಿ ವೈಫೈ ಸೌಲಭ್ಯ, ಒಂಟಿ ಮನೆಗಳ ನಿರ್ಮಾಣ, ಎಲ್ಲಾ ವಾರ್ಡ್‍ಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೂ ಬಜೆಟ್‍ನಲ್ಲಿ ಒತ್ತು ನೀಡುವ ಸಾಧ್ಯತೆ ನಿಚ್ಚಳವಾಗಿದೆ.  ರಾಜ್ಯ ಹಣಕಾಸು ಆಯೋಗದ 286 ಕೋಟಿ ರೂ. ಅನುದಾನದ ಕಾಮಗಾರಿಗಳನ್ನು ಶಾಸಕರ ವಿವೇಚನೆಗೆ ಬಿಡುವುದು, 2018ರ ಚುನಾವಣೆಯಲ್ಲಿ ಸ್ಪರ್ಧಿಸುವವರು ಹಾಗೂ ಶಾಸಕರಿಗೆ ಅನುಕೂಲ ಮಾಡಿಕೊಡಲು ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಬಾರಿ 9300 ಕೋಟಿ ರೂ. ಬಜೆಟ್‍ನ್ನು ಅಂದಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್ ಮಂಡಿಸಿದ್ದರು. ಈ ಬಾರಿ 10ಸಾವಿರದ ಆಜುಬಾಜಿನಲ್ಲೇ ಬಜೆಟ್ ಮಂಡಿಸÀಬೇಕೆಂದು ಈಗಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ತೀರ್ಮಾನಿಸಿದ್ದಾರೆ.
ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಿರಲಿಲ್ಲ. ಹಣವನ್ನೇ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ಬಾರಿ ತರಬೇತಿ ಪಡೆದ ಮಹಿಳೆಯರಿಗೆ ವಾರ್ಡ್ ಒಂದಕ್ಕೆ 40 ಹೊಲಿಗೆ ಯಂತ್ರಗಳನ್ನು ಕೊಡಲು ತೀರ್ಮಾನಿಸಲಾಗಿದೆ. ಹಾಗೆಯೇ ಯುವಕರಿಗೆ ಅನುಕೂಲವಾಗುವಂತೆ ವಾರ್ಡ್‍ವೊಂದಕ್ಕೆ 50 ಸೈಕಲ್‍ಗಳನ್ನು ವಿತರಿಸಲು ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆಗಳಿವೆ.

ಇಪ್ಪತ್ತು ನಾಮನಿರ್ದೇಶಿತ ಸದಸ್ಯರಿಗೆ 50ಲಕ್ಷ ರೂ. ಅನುದಾನ ಕೊಡಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ, ಇದು ವಿರೋಧಪಕ್ಷದವರ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಕಾರಣಕ್ಕೆ ಈ ಅನುದಾನಕ್ಕೆ ಕೊಕ್ಕೆ ಬೀಳುವ ಸಾಧ್ಯತೆ ಇದೆ.  ಹಿಂದುಳಿದ ವರ್ಗದವರು, ಕೆಳವರ್ಗದವರಿಗೆ ಅನುಕೂಲ ಕಲ್ಪಿಸಿ ನಗರದ ಮತದಾರರ ಮನಸೆಳೆಯಲು ನಾಳಿನ ಬಜೆಟ್‍ನಲ್ಲಿ ಕಸರತ್ತು ನಡೆಸಲಾಗಿದೆ ಎಂದು ತಿಳಿದು ಬಂದಿದೆ.  ಮೂಲಭೂತ ಸೌಕರ್ಯ, ರಸ್ತೆ ಅಭಿವೃದ್ಧಿ, ಕೆರೆ ಸಂರಕ್ಷಣೆ, ಹಳೆ ಮಾರುಕಟ್ಟೆಗಳ ಪುನರುಜ್ಜೀವನ, ರುದ್ರಭೂಮಿಗಳ ಆಧುನೀಕರಣ, ಹಳೆ ಮಾರುಕಟ್ಟೆಗಳ ಮೇಲ್ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಹಲವು ಭರಪೂರ ಯೋಜನೆಗಳ ಘೋಷಣೆ ಆಗುವ ಸಾಧ್ಯತೆ ಇದೆ.  ಒಟ್ಟಾರೆ 2018ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗುಣಶೇಖರ್ ಮಂಡಿಸಲಿರುವ ಬಜೆಟ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin