ಮಾಜಿ ನಕ್ಸಲ್ ಮುಖಂಡ ಜುಲ್ಫಿಕರ್ ಜಾಮೀನು ರದ್ದತಿ ಕೋರಿ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

SP-Manivan

ಚಿಕ್ಕಮಗಳೂರು, ಮಾ.24- ಜಾಮೀನು ಷರತ್ತಿನ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಕ್ಸಲ್ ಮುಖಂಡ ನೂರ್ ಜುಲ್ಫಿಕರ್ ಅವರಿಗೆ ನೀಡಿದ ಜಾಮೀನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ಪ್ಯಾಕೇಜ್‍ನಡಿ ಶರಣಾಗಿದ್ದ ನೂರ್ ಜುಲ್ಫಿಕರ್ ಅವರಿಗೆ ಜಾಮೀನು ನೀಡುವಾಗ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿತ್ತು. ನಿಯಮದಂತೆ ಊರು ಬಿಟ್ಟು ಹೊರಗೆ ಹೋಗಬಾರದು, ನಿಮ್ಮ ಮೇಲಿರುವ ಪ್ರಕರಣ ಇತ್ಯರ್ಥವಾಗುವವರೆಗೂ ಠಾಣೆಗೆ ಬಂದು ಸಹಿ ಹಾಕಬೇಕು ಮತ್ತು ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿತ್ತು.

ಆದರೆ, ಈ ಮೇಲಿನ ಷರತ್ತುಗಳನ್ನು ಉಲ್ಲಂಘಿಸಿದ್ದು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಜಾಮೀನು ರದ್ದುಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ.   ಕಳೆದ ವರ್ಷ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪತ್ರಕರ್ತ ಗೌರಿ ಲಂಕೇಶ್ ನೇತೃತ್ವದಲ್ಲಿ ನಕ್ಸಲ್ ಮುಖಂಡ ನೂರ್ ಜುಲ್ಫಿಕರ್ ಅವರು ಪೊಲೀಸರಿಗೆ ಶರಣಾಗಿದ್ದರು. ಬಳಿಕ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿತ್ತು.  ಕೊಪ್ಪ ಡಿವೈಎಸ್‍ಪಿ ನೇತೃತ್ವದ ತಂಡ ಜಾಮೀನು ದೊರೆತ ಬಳಿಕ ಜುಲ್ಫಿಕರ್ ಅವರ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಿತ್ತು. ಇದೀಗ ಹಿಂದಿನ ಚಟುವಟಿಕೆಗಳಲ್ಲಿ ಜುಲ್ಫಿಕರ್ ಒಳಗೊಳಗೆ ಕೆಲಸ ನಿರ್ವಹಿಸಿದ್ದಾರೆ ಎಂದು ಡಿವೈಎಸ್‍ಪಿ ಅವರ ತಂಡ ವರದಿ ನೀಡಿತ್ತು.  ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin