ರೈತರ ಹೆಗಲೇರಿ ಕಾಲುವೆ ದಾಟಿದ ಪ್ರಕರಣ : ವರದಿ ಪಡೆದು ಕ್ರಮ ಕೈಗೊಳ್ಳಲು ಕೋಳಿವಾಡ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Koliwad-Session

ಬೆಂಗಳೂರು,ಮಾ.24-ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರೈತರ ಹೆಗಲೇರಿ ಕಾಲುವೆ ದಾಟಿದ ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಆದೇಶಿಸಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಇದಕ್ಕೆ ಸಮ್ಮತಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಇಂದೇ ವರದಿ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ವರದಿ ಪಡೆದು ಸಿಇಒ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.   ವಿಷಯ ಪ್ರಸ್ತಾಪಿಸಿದ ಮಾನಪ್ಪ ವಜ್ಜಲ್, ಇದೊಂದು ಅಮಾನವೀಯ ಘಟನೆಯಾಗಿದ್ದು , ಅನ್ನದಾತರೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರಿ ಕಾಲುವೆ ದಾಟಿದ್ದು , ರಾಜ್ಯದ ಜನತೆಗೆ ಅಧಿಕಾರಿ ಮಾಡಿದ ಅಪಮಾನವಾಗಿದೆ ಎಂದು ಹೇಳಿದಾಗ, ಜೆಡಿಎಸ್‍ನ ಇತರ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

ಇದನ್ನು ಬೆಂಬಲಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಈ ಘಟನೆ ಅಮಾನವೀಯವಾಗಿದ್ದು , ಮಾಧ್ಯಮಗಳಲ್ಲಿ ಇದರ ಬಗ್ಗೆ ಪ್ರಸಾರವಾಗಿದೆ. ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಸದನ ಸಮಾವೇಶಗೊಂಡಾಗ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ವಿಷಯ ಪ್ರಸ್ತಾಪಿಸಿ ಗಮನಸೆಳೆದಿದ್ದರು. ಆಗ ಸ್ಪೀಕರ್ ಕೋಳಿವಾಡ ಅವರು, ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾವನೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin