ಮಹಿಳಾ ಸಾಕ್ಷರತೆ ಹೆಚ್ಚಾಗಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Gov-t-0-CM

ಬೆಂಗಳೂರು, ಮಾ.25- ಯಾವ ಸಮಾಜದಲ್ಲಿ ಮಹಿಳೆಯರು ಶೋಷಣೆಯಿಂದ ಮುಕ್ತರಾಗುವುದಿಲ್ಲವೋ ಅದು ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿಂದು ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.  ಅನೇಕ ವರ್ಷಗಳ ಕಾಲ ಮಹಿಳೆಯರನ್ನು ಶಿಕ್ಷಣದಿಂದ ವ್ಯವಸ್ಥಿತವಾಗಿ ನಮ್ಮ ಸಮಾಜ ದೂರ ಇಡಲು ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾದರು. ಈಗಲೂ ಸಮಾಜದಲ್ಲಿ ತಾರತಮ್ಯವಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ಸಮಾಜದಲ್ಲಿ ಹೆಚ್ಚುತ್ತಿರುವ ಶೋಷಣೆಯಿಂದ ಮಹಿಳೆಯರು ಮುಕ್ತರಾಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣ ಪಡೆದು ಶಿಕ್ಷಿತರಾದರೆ ನಮ್ಮಲ್ಲಿರುವ ಅಂಕುಡೊಂಕುಗಳನ್ನು ತಿದ್ದುಕೊಳ್ಳಬಹುದು. ಎಲ್ಲಾ ಅಪಮಾನ, ಅವಮಾನಗಳಿಗೆ ಶಿಕ್ಷಣವೇ ಪ್ರಬಲ ಅಸ್ತ್ರವಾಗಿದ್ದು, ಇದನ್ನು ಯಾರೂ ಕಡೆಗಣಿಸಬಾರದು ಎಂದು ಸಿಎಂ ನೆನಪಿಸಿದರು.  21ನೆ ಶತಮಾನದಲ್ಲಿ ಮಹಿಳೆಯರು ಚಂದ್ರಲೋಕ, ಮಂಗಳಗ್ರಹ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಸ್ಪರ್ಧೆ ಒಡ್ಡುತ್ತಿದ್ದಾರೆ. ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಆದರೆ ಪುರುಷಪ್ರಧಾನ ಸಮಾಜ ಅವರನ್ನು ಹಿಂದಿಕ್ಕಿ ಪ್ರಯತ್ನ ಮಾಡಿದರೆ ಈತ ತಾರತಮ್ಯ ಹೋಗಲಾಡಿಸಲು ಇನ್ನೂ ಅನೇಕ ವರ್ಷಗಳೇ ಹಿಡಿಸುತ್ತವೆ ಎಂದು ಹೇಳಿದರು.

ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಬೆಳೆದಿದ್ದಾರೆ. ಎಂಥದ್ದೇ ಕ್ಲಿಷ್ಟ ಪರಿಸ್ಥಿತಿ ಬಂದರೂ ಅದನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮಥ್ರ್ಯ ಅವರಲ್ಲಿದೆ. ತೊಟ್ಟಿಲು ತೂಗುವ ಕೈ ಪ್ರಪಂಚವನ್ನೇ ತೂಗಬಲ್ಲದು ಎಂಬುದಕ್ಕೆ ಅನೇಕ ಮಹಿಳೆಯರ ಸಾಧನೆಗಳೇ ನಮಗೆ ಸ್ಫೂರ್ತಿಯಾಗಬೇಕು ಎಂದರು.
ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ಬೆನಜಿರ್‍ಭುಟ್ಟೋ ಸೇರಿದಂತೆ ಹಲವು ಮಹಿಳೆಯರು ತಮ್ಮ ತಮ್ಮ ದೇಶಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದರಿಂದಲೇ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರ. ನೀವು ಕೂಡ ಅವರ ಹಾದಿಯಲ್ಲೇ ಸಾಗಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿನೌಕರರ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮಾತನಾಡಿ, ಮುಖ್ಯಮಂತ್ರಿಯವರು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವೇತನ ಆಯೋಗ ರಚನೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ಪ್ರಶಂಸಿಸಿದರು.  ವೇತನ ಆಯೋಗ ಸರ್ಕಾರಕ್ಕೆ ಅಂತಿಮ ವರದಿ ನೀಡುವ ಮೊದಲೇ ನೌಕರರಿಗೆ ಶೇ.30ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಕೆಂಪೇಗೌಡ ಬಡಾವಣೆಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ವಿಶೇಷ ಮಂಜೂರಾತಿ ಒದಗಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧ ಬೋಪಣ್ಣ (ಆಡಳಿತ), ಜಗದಾಳೆ ವೈಜ್ಞಾನಿಕ ಸಂಶೋಧನಾ ಫೌಂಡೇಶನ್‍ನ ಉಪಾಧ್ಯಕ್ಷೆ ಪ್ರೋ.ಕೆ.ಜಯಶ್ರೀ(ವೈದ್ಯಕೀಯ), ಸಮಾಜ ಸೇವಕಿ ಪ್ರೇಮಾಮಂಜುನಾಥ್ (ಮಹಿಳಾ ಅಭಿವೃದ್ಧಿ) ಮತ್ತೊರ್ವ ಸಮಾಜ ಸೇವಕಿ ರಾಧಾ ದಾಸ್ (ಮಹಿಳಾ ಅಭಿವೃದ್ಧಿ), ಕೃಷಿಮತ್ತು ಸಮಾಜ ಸೇವಾ ಕ್ಷೇತ್ರಕ್ಕೆ ಪ್ರೇಮಾ ತಿಮ್ಮನಗೌಡ್ರ, ಛಾಯಾಚಿತ್ರ ಕ್ಷೇತ್ರದಲ್ಲಿ ಅಶ್ವಿನಿ ನಿತಿನ್ ಅವರುಗಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ನೌಕರ ಸಂಘ ಗೌರವ ಅಧ್ಯಕ್ಷ ಎಚ್.ಕೆ.ರಾಮು, ಖಜಾಂಚಿ ಯೋಗಾನಂದ, ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ. ಉಣ್ಣಿಗೆರೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin