ಆಯಾ ವರ್ಷದ ಅಂತ್ಯದೊಳಗೆ ವಿದ್ಯಾರ್ಥಿ ವೇತನ ಪಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Anjaneya

ಬೆಂಗಳೂರು, ಮಾ.27-ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ಆಯಾ ವರ್ಷದ ಅಂತ್ಯದೊಳಗೆ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಧಾನಪರಿಷತ್‍ನಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಆಯಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ, ಆಯಾ ವರ್ಷವೇ ಜಮಾ ಮಾಡಲಾಗುವುದು. ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಈ ವಿವಿಧ ಯೋಜನೆಗಳ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

ಹೈದರಾಬದ್-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಒಟ್ಟು 502 ವಿದ್ಯಾರ್ಥಿ ನಿಲಯಗಳ ಪೈಕಿ 264 ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡ ಹೊಂದಿವೆ. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 248 ಹಾಸ್ಟೆಲ್‍ಗಳ ಪೈಕಿ ರಾಜ್ಯ ವಲಯ ಯೋಜನೆಗಳಡಿ 32 ಹಾಸ್ಟೆಲ್, ಹೈ-ಕ ಪ್ರದೇಶಾಭಿವೃದ್ಧಿ ಯೋಜನೆಯಡಿ 12 ಹಾಸ್ಟೆಲ್ ನಿರ್ಮಿಸಲಾಗುತ್ತಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

+ ಶೀಘ್ರದಲ್ಲೇ ವಸತಿ ನಿಲಯಗಳ ಹೊಸ ಕಟ್ಟಡ

ಬೆಂಗಳೂರು, ಮಾ.27- ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ವಸತಿ ನಿಲಯಗಳನ್ನು ನೆಲಸಮಗೊಳಿಸಿ ಶೀಘ್ರದಲ್ಲೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ.  ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಿ ಲೋಕೋಪಯೋಗಿ ಇಲಾಖೆಯಿಂದ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಲ್ಲದೆ ಅಗತ್ಯವಿರುವ ಕಡೆ ದುರಸ್ತಿ ಕ್ರಮಕೈಗೊಳ್ಳಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಸತಿ ನಿಲಯಗಳು ಶಿಥಿಲಾವಸ್ಥೆಯಲ್ಲಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

2012-13, 14-15ನೇ ಸಾಲಿನಲ್ಲಿ 5444 ಕೋಟಿ ರೂ. , 16-17ನೇ ಸಾಲಿನಲ್ಲಿ 7793.33 ಲಕ್ಷ ಹಾಗೂ 17-18ರಲ್ಲಿ 1500.53 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.

+ ವಿದ್ಯಾವಂತ ನಿರುದ್ಯೋಗಿಗಳನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ಇ-ಗ್ರಾಮ ರಾಯಭಾರಿ

ಬೆಂಗಳೂರು, ಮಾ.27- ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ವತಿಯಿಂದ ವಿದ್ಯಾವಂತ ನಿರುದ್ಯೋಗಿಗಳನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ಇ-ಗ್ರಾಮ ರಾಯಭಾರಿ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ವಿಧಾನ್ ಪರಿಷತ್‍ನಲ್ಲಿ ತಿಳಿಸಿದ್ದಾರೆ.  ಸದಸ್ಯ ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯುವಜನತೆ ಉದ್ಯೋಗ ಅರಸಿ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದು ಇದರ ಮೂಲ ಉದ್ದೇಶ. ಈ ಯೋಜನೆಯಡಿ ಯುವ ಜನರನ್ನು ಒಳಗೊಂಡ ಸ್ವಸಹಾಯ ಗುಂಪುಗಳಿಗೆ 35 ಸಾವಿರ ರೂ.ಗಂತೆ ಒಂದು ಸಂಘಕ್ಕೆ 3.5 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು.

ವಿದ್ಯಾವಂತ ಯುವಜನರನ್ನು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲೀಕರಣಗೊಳಿಸುವುದು, ಗ್ರಾಮೀಣ ಜನರಿಗೆ ಮಾಹಿತಿ ತಲುಪಿಸಲು ಇ- ಗ್ರಾಮ ರಾಯಭಾರಿ ಯೋಜನೆಯನ್ನು ಆರಂಭಿಸಲಾಗಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ನಮೂದಿಸಿರುವಂತೆ ಅತಿ ಹಿಂದುಳಿದ 40 ಹಾಗೂ ಅತ್ಯಂತ ಹಿಂದುಳಿದ 30 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin