ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Nishedaajne

ಬೆಂಗಳೂರು, ಮಾ.28-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತ್ತು ನಾಳೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಕಗ್ಗಲಹುಂಡಿ ಗ್ರಾಮದಲ್ಲಿ ನಾಗೇಶ್ ಎಂಬುವವರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.  ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭ ಮೆರವಣಿಗೆ ಮಾಡುವಂತಿಲ್ಲ. 5ಕ್ಕಿಂತ ಹೆಚ್ಚು ಜನ ಸೇರಿ ಚರ್ಚೆ ಮಾಡುವಂತಿಲ್ಲ. ಆದರೆ ಪೂರ್ವಾನುಮತಿ ಪಡೆದಿರುವ ಸಭೆಗಳಿಗೆ ಅವಕಾಶವಿದೆ ಎಂದು ಗುಂಡ್ಲುಪೇಟೆ ಚುನಾವಣಾಧಿಕಾರಿಯಾಗಿರುವ ನಲೀನ್ ಅತುಲ್ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಪ್ರಚಾರದ ಭರಾಟೆ ದಿನಕ್ಕೆ ಜೋರಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭಾರೀ ಪ್ರಚಾರ ಕೈಗೊಂಡಿದ್ದಾರೆ.  ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್‍ಕುಮಾರ್ ಪರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿವಿಧ ಕಡೆಗಳಲ್ಲಿ ರೋಡ್‍ಶೋ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ 20 ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಗೀತಾ  ಮಹದೇವಪ್ರಸಾದ್ ಪರ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ದಿನೇಶ್‍ಗುಂಡೂರಾವ್ ಪ್ರಚಾರ ಕಾರ್ಯ ನಡೆಸಿದ್ದಾರೆ.

ಈ ನಡುವೆ ಸಾವಿನ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಬಹುದೆಂಬ ಕಾರಣ ಇಂದು ಮತ್ತು ನಾಳೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪ್ರಚಾರದ ಮೇಲೆ ಕರಿನೆರಳು ಬಿದ್ದಿದೆ. ಆದರೆ ಅಂತಿಮ ಸಂಸ್ಕಾರ ಯಾತ್ರೆಗೆ ಯಾವುದೇ ತೊಂದರೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin