28 ಲಕ್ಷ ರೂ. ಮೌಲ್ಯದ ಬ್ರೌನ್ ಶುಗರ್ ವಶ, ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

4-Arrested--1

ಬೆಂಗಳೂರು, ಮಾ.28– ಉದ್ಯಾನನಗರಿ ಯಲ್ಲಿ ಮಾದಕ ವಸ್ತು ಮಾರಾಟ ದಂಧೆ ವಿರುದ್ಧದ ಕಾರ್ಯಾಚರಣೆಯನ್ನು ಪೊಲೀಸರು ಚುರುಕು ಗೊಳಿಸಿ ದ್ದಾರೆ. ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 28 ಲಕ್ಷ ರೂ. ಮೌಲ್ಯದ 492.80 ಗ್ರಾಂ ಬ್ರೌನ್ ಶುಗರ್ ನಗದು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.   ತಮಿಳುನಾಡಿನ ಕೃಷ್ಣಗಿರಿಯ ವಿಜಯ ಕುಮಾರ್ (47), ಆಂಧ್ರಪ್ರದೇಶದ ಅರಗುಮಾನಿಪಲ್ಲಿಯ ಬಸಪ್ಪ(43), ಕೃಷ್ಣಗಿರಿಯ ಪೊನ್ನಸ್ವಾಮಿ (50) ಹಾಗೂ ಬಂಗಾರಪೇಟೆಯ ಗೋವಿಂದಪ್ಪ (45) ಬಂಧಿತ ಆರೋಪಿಗಳು.

ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿ ಕೆರೆಕೋಡಿ ಬಸ್ ನಿಲ್ದಾಣದ ಬಳಿ ಬ್ರೌನ್ ಶುಗರ್ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ ಮಹಾಂತ ರೆಡ್ಡಿ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಕೊಟ್ರೇಶಿ ಮತ್ತು ಸಿಬ್ಬಿಂದಿ ದಾಳಿ ಮಾಡಿ ವಿಜಯ್ ಕುಮಾರ್ ಮತ್ತು ಬಸಪ್ಪನನ್ನ ಬಂಧಿಸಿ ಅವರ ಬಳಿ ಇದ್ದ 5 ಗ್ರಾಂ ತೂಕದ 9 ಬ್ರೌನ್ ಶುಗರ್ ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡರು.   ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಆ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಹೊಸಕೆರೆಹಳ್ಳಿ ನೈಸ್ ರಸ್ತೆಯ ಟೋಲ್ ಪ್ಲಾಜಾದ ಪಾರ್ಕಿಂಗ್ ಬಳಿ ನಿಂತಿದ್ದ ಪೊನ್ನಸ್ವಾಮಿ ಮತ್ತು ಗೋವಿಂದಪ್ಪನನ್ನು ಪೊಲೀಸರು ಬಂಧಿಸಿ 28,00,000 ರೂ. ಮೌಲ್ಯದ 492.8 ಗ್ರಾಂ ತೂಕದ ಬ್ರೌನ್ ಶುಗರ್, 10,000 ರೂ. ನಗದು, ಹಾಗೂ ಒಂದು ಹೊಂಡಾ ಲಿವೋ ಬೈಕ್‍ನನ್ನು ಜಪ್ತಿ ಮಾಡಿದ್ದಾರೆ.

ಈ ಮಾದಕ ವಸ್ತುವನ್ನು ಕೃಷ್ಣಗಿರಿ ಮೂಲಕ ವಿನೋದ್ ಕುಮಾರ್ ಎಂಬಾತ ಈ ಆರೋಪಿಗಳಿಗೆ ಕೊಟ್ಟು ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜುಗಳು, ರೆಸಾರ್ಟ್‍ಗಳು ಹಾಗೂ ಬಾರ್ ಮತ್ತು ರೆಸ್ಟೋರೆಂಟ್‍ಗಳ ಬಳಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾರಾಟ ಮಾಡಿಸುತ್ತಿದ್ದ. 5 ಗ್ರಾಂ ಬ್ರೌನ್ ಶುಗರ್‍ಗೆ ತಲಾ 25,000 ರೂ.ಗಳಂತೆ ಮಾರಾಟ ಮಾಡಿ ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು ಎಂದು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಪ್ರಕಟಣೆ ತಿಳಿಸಿದೆ.   ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿನೋದ್‍ಕುಮಾರ್‍ಗಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಡಿಸಿಪಿ ಡಾ. ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin